ಹತ್ತು ತಿಂಗಳ ಬಳಿಕ ಶಾಲೆ ; ಮಕ್ಕಳಿಗೆ ಖುಷಿಯೋ ಖುಷಿ ; ಈ ಶಾಲೆಯಲ್ಲಿ ವಾದ್ಯ, ನಗಾರಿಯ ಗೌರವ !

01-01-21 01:34 pm       Udupi Correspondent   ಕರಾವಳಿ

ಕಡೆಗೂ ರಾಜ್ಯ ಸರಕಾರ ಶಾಲೆಯನ್ನು ಆರಂಭಿಸಲು ಹಸಿರು ನಿಶಾನೆ ನೀಡಿದ್ದು ಬೋರು ಹಿಡಿಸಿದ್ದ ಮಕ್ಕಳಲ್ಲಿ ಖುಷಿ ಇಮ್ಮಡಿಸಿದೆ.

ಉಡುಪಿ, ಜ.1: ಶಾಲೆ, ಕಾಲೇಜು ಮಕ್ಕಳ ಪಾಲಿಗೆ ಹೊಸ ವರ್ಷ ಹೊಸ ಕಳೆ ತಂದಿದೆ. ಕಡೆಗೂ ರಾಜ್ಯ ಸರಕಾರ ಶಾಲೆಯನ್ನು ಆರಂಭಿಸಲು ಹಸಿರು ನಿಶಾನೆ ನೀಡಿದ್ದು ಬೋರು ಹಿಡಿಸಿದ್ದ ಮಕ್ಕಳಲ್ಲಿ ಖುಷಿ ಇಮ್ಮಡಿಸಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಿಂದ ಶಾಲೆ, ಕಾಲೇಜಿಗೆ ಪೂರ್ತಿ ಬ್ರೇಕ್ ಬಿದ್ದಿತ್ತು. ಕೊರೊನಾ ಮಹಾಮಾರಿ ಜಗತ್ತನ್ನು ಕಂಗೆಡಿಸಿದ ಬಳಿಕ ಹತ್ತು ತಿಂಗಳು ಕಳೆದು ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲೂ ಹೊಸ ಕಳೆ ಮೂಡಿದೆ. ಶಾಲೆಯ ಗೆಳೆಯರು ಇಲ್ಲದೆ, ಮನೆಯಲ್ಲಿ ಕುಳಿತು ಬೋರು ಹಿಡಿದಿದ್ದ ಮಕ್ಕಳು ಇಂದು ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ವಿಶೇಷ ಅನಿಸಿದ್ದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಗೌರವ.

ವಾದ್ಯ, ನಗಾರಿಗಳ ವಾದನದ ಜೊತೆ ಮಕ್ಕಳನ್ನು ಊರವರು ಮತ್ತು ಶಿಕ್ಷಕರು ಗೌರವಪೂರ್ವಕವಾಗಿ ಶಾಲೆಗೆ ಬರಮಾಡಿಕೊಂಡಿದ್ದಾರೆ. ಮಕ್ಕಳು ಸಾಲಾಗಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಅತ್ತ ಸುಶ್ರಾವ್ಯವವಾಗಿ ವಾದ್ಯ ನುಡಿಸುತ್ತಿದ್ದರು. ಶಾಲೆಗೆ ಎಂಟ್ರಿ ಪಡೆಯುತ್ತಿದ್ದಂತೆ ಸ್ಯಾನಿಟೈಸ್ ಹಾಕಿದರೆ, ಮತ್ತೊಂದು ಕಡೆ ಮಕ್ಕಳಿಗೆ ಸಿಹಿ ನೀಡಿ ಬರಮಾಡಿಕೊಂಡರು. ಈ ರೀತಿಯ ವಿಶಿಷ್ಟ ಶಾಲಾರಂಭ ನಡೆದಿದ್ದು ಕಾಪು ತಾಲೂಕಿನ ಮಜೂರು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಶಾಲೆಯನ್ನು ಹೂಗಳಿಂದ ಅಲಂಕರಿಸಿ, ದ್ವಾರಕ್ಕೆ ಬಾಳೆಗಿಡವನ್ನು ಕಟ್ಟಿ ಊರಿನ ಗಣ್ಯರು, ಶಿಕ್ಷಕರೊಂದಿಗೆ ಸೇರಿ ವಿಶಿಷ್ಟ ರೀತಿಯಲ್ಲಿ ಶಾಲೆಗೆ ಮಕ್ಕಳನ್ನು ಎಂಟ್ರಿ ಮಾಡಿಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 

Video: