ತೊಕ್ಕೊಟ್ಟು: ಅಬ್ಬಕ್ಕ ಭವನಕ್ಕಾಗಿ ಮೌನ ಪ್ರತಿಭಟನೆ, ನೂರಾರು ಜನರ ಹಕ್ಕೊತ್ತಾಯ

01-01-21 01:40 pm       Mangalore Correspondent   ಕರಾವಳಿ

ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಶೀಘ್ರ ಅಬ್ಬಕ್ಕ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. 

ಉಳ್ಳಾಲ, ಜ.1: ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಶೀಘ್ರ ಅಬ್ಬಕ್ಕ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಅಬ್ಬಕ್ಕ ಭವನಕ್ಕೆ ಕಾಯ್ದಿರಿಸಿದ 41 ಸೆಂಟ್ಸ್ ಜಮೀನಿನಲ್ಲಿ ಅಬ್ಬಕ್ಕ ಅಭಿಮಾನಿಗಳು ಇಂದು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. 

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಅಬ್ಬಕ್ಕ ಭವನ ಎನ್ನುವುದು ಸಾಂಸ್ಕೃತಿಕ ಲೋಕದ ಸಂಕೇತವಾಗಿದೆ. ಅಬ್ಬಕ್ಕ ಭವನಕ್ಕಾಗಿ  ನಡೆಸುತ್ತಿರುವ ಈ ಪ್ರತಿಭಟನೆ ವಿಕೃತಿ ಅಲ್ಲ. ನಮ್ಮೆಲ್ಲರ ಒತ್ತಾಯ ಆಗಿದೆ. ಉಳ್ಳಾಲದಲ್ಲಿ ಬ್ಯಾರಿ ಭವನ ಆಗಲು ಯಾರ ವಿರೋಧವೂ ಇಲ್ಲ. 9 ವರುಷದಿಂದ ನೆನೆಗುದಿಗೆ ಬಿದ್ದಿರುವ ಬಹು ಬೇಡಿಕೆಯ ಅಬ್ಬಕ್ಕ ಭವನ ಶೀಘ್ರವೇ ನಿರ್ಮಾಣವಾಗಬೇಕೆಂದು ನಾವೆಲ್ಲರೂ ಈ ಮೂಲಕ ಆಗ್ರಹಿಸುತ್ತೇವೆ ಎಂದರು. 

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಮಾತನಾಡಿ ಆರಂಭದಲ್ಲಿ ಅಬ್ಬಕ್ಕ ಭವನ ನಿರ್ಮಾಣದ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ವಹಿಸಿತ್ತು. ಇದೀಗ ನಿರ್ಮಾಣದ ಜವಾಬ್ದಾರಿಯನ್ನು ಹೌಸಿಂಗ್ ಬೋರ್ಡ್ ವಹಿಸಿದ್ದು ಇಲ್ಲಿ ಯಾವುದರಲ್ಲೂ ಪರಸ್ಪರ ಸಮನ್ವಯತೆ ಇಲ್ಲದಂತಾಗಿದೆ. ದ.ಕ ಜಿಲ್ಲಾಧಿಕಾರಿ ಖಜಾನೆಯಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಬೇಕಾದ ಅನುದಾನ ಇದೆ. ಇಲ್ಲಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಅಬ್ಬಕ್ಕ ಎಲ್ಲ ಜಾತಿ, ಮತದವರಿಗೂ ಸಂಬಂಧಿಸಿದ ರಾಣಿಯಾಗಿದ್ದು ಈ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ ಎಂದರು. 

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಉಳ್ಳಾಲದ ಜನತೆ ಎಂದಿಗೂ ಅನ್ಯೋನ್ಯತೆಯಲ್ಲಿರಬೇಕು. ಉಳ್ಳಾಲ ನಮಗೆ ಗೊತ್ತಿರುವ  ಅತೀ ಸೂಕ್ಷ್ಮ  ಪ್ರದೇಶ. ಬ್ಯಾರಿ ಭವನ ಇಲ್ಲೇ ನಿರ್ಮಿಸುವ ಔಚಿತ್ಯವೇನು ? ಉಳ್ಳಾಲದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಅದರ ನಿರ್ಮಾಣಕ್ಕೆ ಕಲ್ಲಾಪು, ಉಳ್ಳಾಲ, ಮಂಜನಾಡಿ, ಮುಡಿಪು ಪ್ರದೇಶಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಅಬ್ಬಕ್ಕ ಭವನ ನಿರ್ಮಾಣದ ಕಾರ್ಯವನ್ನು ತಕ್ಷಣ ಜಿಲ್ಲಾಧಿಕಾರಿಗಳು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.  

ಅಕ್ಷರ ಸಂತ ಹರೇಕಳ ಹಾಜಬ್ಬ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪದಾಧಿಕಾರಿಗಳಾದ ಸದಾನಂದ ಬಂಗೇರ, ರಾಘವ ಮಾಸ್ಟರ್, ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ ತೊಕ್ಕೊಟ್ಟು, ರಾಜ್ಯಾಧ್ಯಕ್ಷರಾದ ಎಲ್.ಕೆ ಸುವರ್ಣ, ಜಿಲ್ಲಾಧ್ಯಕ್ಷರಾದ ಲೋಕೇಶ್ ಉಳ್ಳಾಲ , ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಅನುರಾಧ ,  ಮಂಗಳೂರು ದಕ್ಷಿಣ ಕ್ಷೇತ್ರಾಧ್ಯಕ್ಷರಾದ ಸುಬ್ರಹ್ಮಣ್ಯ ರಾವ್, ಉತ್ತರ ಕ್ಷೇತ್ರಾಧ್ಯಕ್ಷರಾದ ನಾಗೇಶ್ ತಡಂಬೈಲ್, ಲೋಕಾನಂದ ಆರ್ಯ , ಸ್ಥಳೀಯ ಮುಖಂಡರಾದ ಸೀತಾರಾಮ ಬಂಗೇರ, ರಮೇಶ್ ಕೊಲ್ಯ, ಭಗವಾನ್ ದಾಸ್, ಪವಿತ್ರ ಕುಮಾರ್ ಗಟ್ಟಿ ಮೊದಲಾದವರು ಇದ್ದರು.