ರಥಬೀದಿ ಕಾಂಕ್ರೀಟ್ ರಸ್ತೆ ಬಿರುಕು!! ಇಂಜಿನಿಯರ್ ಗಳ ವಿರುದ್ಧ ಕ್ರಮ ? ಎನ್ಐಟಿಕೆ ವರದಿ ಕೇಳಿದ ಶಾಸಕ

02-01-21 05:15 pm       Mangalore Correspondent   ಕರಾವಳಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸತಾಗಿ ಮಾಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ತಿಂಗಳು ತುಂಬುವ ಮೊದಲೇ ಬಿರುಕು ಬಿಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು, ಜ.2: ನಗರದ ರಥಬೀದಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸತಾಗಿ ಮಾಡಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ತಿಂಗಳು ತುಂಬುವ ಮೊದಲೇ ಬಿರುಕು ಬಿಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 17 ಕೋಟಿ ವೆಚ್ಚದಲ್ಲಿ ರಥಬೀದಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ತಿಯಾಗಿ ಕಾಮಗಾರಿ ನಡೆದಿಲ್ಲ. ಇದರ ಮಧ್ಯೆಯೇ ಟ್ರಾಫಿಕ್ ತಪ್ಪಿಸುವ ನಿಟ್ಟಿನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಕೊನೆಯ ಹಂತದ ಕಾಮಗಾರಿ ಸದ್ಯಕ್ಕೆ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಗೂ ದಿನ ನಿಗದಿಪಡಿಸಲು ತಯಾರಿ ನಡೆದಿತ್ತು. ಆದರೆ ಇದರ ನಡುವೆಯೇ ಹೊಸತಾಗಿ ಮಾಡಿರುವ ಕಾಂಕ್ರೀಟ್ ರಸ್ತೆ ಉದ್ದಕ್ಕೂ ಬಿರುಕು ಬಿಟ್ಟಿದೆ.

ಬಿರುಕು ಬಿಟ್ಟು ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರ ಆಕ್ಷೇಪ ಕೇಳಿಬರುತ್ತಿದ್ದಂತೆಯೇ ನಿನ್ನೆ ರಾತ್ರೋರಾತ್ರಿ ಬಿರುಕು ಬಿದ್ದ ರಸ್ತೆಯ ಭಾಗಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದೆ. ಇಂದು ಬೆಳಗ್ಗೆ ರಸ್ತೆ ನೋಡಿದ ಸಾರ್ವಜನಿಕರಿಗೆ ಶಾಕ್ ಆಗಿತ್ತು. ಬ್ಯಾರಿಕೇಡ್ ಹಾಕಿ, ಕಾಮಗಾರಿ ನಡೆಸಿದ್ದ ಜಾಗಕ್ಕೆ ಸಂಚಾರ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ಕೆಲವು ತಜ್ಞರಲ್ಲಿ ಕೇಳಿದಾಗ, ಕಾಂಕ್ರೀಟ್ ಮಿಕ್ಸಿಂಗ್ ಮತ್ತು ಕ್ಯೂರಿಂಗ್ ಸಂದರ್ಭ ಲೋಪವಾದರೆ ಇಂಥ ಬಿರುಕು ಬರುತ್ತದೆ ಎಂದಿದ್ದಾರೆ. ಇನ್ನೊಬ್ಬರಲ್ಲಿ ಕೇಳಿದಾಗ, ರಥಬೀದಿಯ ಕಾಮಗಾರಿ ನಡೆಸುವ ಮೊದಲು ಪೈಪ್ ಲೈನ್ ಹಾಕುವುದಕ್ಕಾಗಿ ಹತ್ತಡಿ ಆಳಕ್ಕೆ ಅಡಿಭಾಗವನ್ನು ಅಗೆಯಲಾಗಿತ್ತು. ಅಗೆದ ಜಾಗದಲ್ಲಿ ಮಣ್ಣನ್ನು ಸರಿಯಾಗಿ ರೀ ಫಿಲ್ಲಿಂಗ್ ಮಾಡದೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಸ್ಲಾಬ್ ಹಾಕಿದರೆ ಬಿರುಕು ಬಿಡುವ ಸಾಧ್ಯತೆ ಇದೆ ಎಂದಿದ್ದಾರೆ.

ಇಂಜಿನಿಯರ್ ವಿರುದ್ಧ ಕ್ರಮ ; ಶಾಸಕ ಕಾಮತ್  

ಈ ಬಗ್ಗೆ ಮಂಗಳೂರಿನ ಶಾಸಕ ವೇದವ್ಯಾಸ್ ಕಾಮತ್ ಗಮನ ಸೆಳೆದಾಗ, ಅದರ ಬಗ್ಗೆ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೆ, ಕಾಂಕ್ರೀಟ್ ಕಾಮಗಾರಿಯ ಬಗ್ಗೆ ಈಗಾಗ್ಲೇ ಎನ್ಐಟಿಕೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಕಾಮಗಾರಿಯಲ್ಲಿ ಲೋಪ ಆಗಿದ್ದರೆ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇಂಥ ಕಾಮಗಾರಿಯಿಂದ ಜನರು ದೂರುವುದು ಜನಪ್ರತಿನಿಧಿಗಳನ್ನು. ಯಾರದ್ದೋ ಲೋಪಕ್ಕೆ ನಮ್ಮ ಹೆಸರು ಕೆಡಿಸುವ ಕೆಲಸ ಆಗುತ್ತದೆ. ಇದಕ್ಕಾಗಿ ಲೋಪಗೈದ ಇಂಜಿನಿಯರ್ ಗಳನ್ನು ಶಿಕ್ಷಿಸಲು ಸರಕಾರಕ್ಕೆ ಬರೆಯುತ್ತೇನೆ ಎಂದು ಹೇಳಿದ್ದಾರೆ.

ತಿಂದು ತೇಗಿದವರೇ ಇಂಜಿನಿಯರ್ !

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹತ್ತಾರು ವರ್ಷಗಳಿಂದ ಇಂಜಿನಿಯರ್ ಆಗಿದ್ದುಕೊಂಡು ತಿಂದು ತೇಗಿದ್ದವರನ್ನೇ ಸ್ಮಾರ್ಟ್ ಸಿಟಿಯ ಇಂಜಿನಿಯರ್ ಆಗಿ ನೇಮಕ ಮಾಡಲಾಗಿದೆ. ತಿಂದು ತೇಗುವ ಇಂಜಿನಿಯರ್ ಗಳು ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಇರಲ್ಲ. ಇಂಥವರನ್ನು ಮನೆಗೆ ಕಳಿಸಿ, ಹೊಸಬರನ್ನು ಇಂಜಿನಿಯರ್ ಆಗಿ ನೇಮಕ ಮಾಡಬೇಕಾದ ಅಗತ್ಯವಿದೆ.

ಈಗಾಗ್ಲೇ ಇಲಾಖೆ ಮಾನದಂಡ ಪ್ರಕಾರ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸಲಾಗುತ್ತಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲಾಗಿದೆ. ಈ ನಡುವೆ, ಒಂದು ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದ ಕೋಟ್ಯಂತರ ವೆಚ್ಚದ ಪ್ರಾಜೆಕ್ಟ್ ನಿಜಬಣ್ಣ ಬಯಲಾಗಿದೆ.

The Car Street road which was completed just a month ago has now been cracked. Mla Vedavyas Kamth has asked NITK to submit report.