ಮೊಬೈಲ್ ಬಗ್ಗೆ ಗದರಿದ್ದಕ್ಕೆ ಬಾತ್ ರೂಮ್ ಬಾಗಿಲು ಹಾಕ್ಕೊಂಡು ಬೇಸ್ತು ಬೀಳಿಸಿದ ಬಾಲಕ !! 

02-01-21 07:37 pm       Udupi Correspondent   ಕರಾವಳಿ

ಬಾತ್ ರೂಮ್‌ನಲ್ಲಿ ಚಿಲಕ ಹಾಕಿ ಒಳಗೆ ಅವಿತುಕೊಂಡು ಮನೆಯವರು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನೇ ಬೇಸ್ತು ಬೀಳಿಸಿದ್ದಾನೆ. 

ಉಡುಪಿ, ಜ.2: ತಾಯಿ ಬೈದ ಕಾರಣಕ್ಕೆ ಸಿಟ್ಟಿಗೆದ್ದ ಬಾಲಕ ಫ್ಲ್ಯಾಟ್‌ನ ಬಾತ್ ರೂಮ್‌ನಲ್ಲಿ ಚಿಲಕ ಹಾಕಿ ಒಳಗೆ ಅವಿತುಕೊಂಡು ಮನೆಯವರು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನೇ ಬೇಸ್ತು ಬೀಳಿಸಿದ್ದಾನೆ. 

ಮಣಿಪಾಲ ಪ್ರೆಸ್ ಸಮೀಪ ಇರುವ ಏಳು ಮಹಡಿಯ ವಸತಿ ಸಮುಚ್ಛಯದ ನಾಲ್ಕನೇ ಮಹಡಿಯಲ್ಲಿ ಘಟನೆ ನಡೆದಿದೆ.  ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಒಟ್ಟು ಆರು ಮಂದಿ ಸಿಬ್ಬಂದಿ ಒಂದು ಗಂಟೆ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. 

ಮೊಬೈಲ್ ನೋಡುವ ವಿಚಾರದಲ್ಲಿ ತನ್ನ ಮಗನಿಗೆ ತಾಯಿ ಜ.1ರಂದು ರಾತ್ರಿ ಬೈದಿದ್ದರೆನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ 17ರ ಹರೆಯದ ಬಾಲಕ ಫ್ಲಾಟ್‌ನ ಬಾತ್‌ ರೂಮ್‌ಗೆ ಹೋಗಿ ಚಿಲಕ ಹಾಕಿಕೊಂಡಿದ್ದಾನೆ. ಎಷ್ಟು ಬಾಗಿಲು ಬಡಿದರೂ ತೆಗೆಯದ ಬಾಲಕ ಗಂಟೆಗಳ ಕಾಲ ಯಾವುದೇ ಮಾತಿಲ್ಲದೆ ಕುಳಿತುಕೊಂಡಿದ್ದ ಎನ್ನಲಾಗಿದೆ.

ಇದರಿಂದ ಭಯಭೀತರಾದ ಮನೆಯವರು ಕೂಡಲೇ ಉಡುಪಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಿಬ್ಬಂದಿಗಳು, ಬಾಲಕನ ರಕ್ಷಣೆಗೆ ಕಾರ್ಯತಂತ್ರ ರೂಪಿಸಿದರು. ಬಾತ್‌ರೂಮ್ ಬಾಗಿಲು ಮುರಿದರೆ, ಬಾಲಕ ಬಾತ್‌ರೂಮ್ ಕಿಟಕಿಯಿಂದ ಹೊರಹಾರಬಹುದೆಂಬ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದರು.

ಅದಕ್ಕಾಗಿ ಕಟ್ಟಡದ ಏಳನೇ ಮಹಡಿಯಿಂದ ಹಗ್ಗದ ಮೂಲಕ ಓರ್ವ ಸಿಬ್ಬಂದಿ ನಾಲ್ಕನೇ ಮಹಡಿಯ ಬಾತ್‌ರೂಮ್‌ನ ಕಿಟಕಿ ಬಳಿಗೆ ಇಳಿದು ಬಾಲಕ ಹೊರ ಹಾರದಂತೆ ತಡೆಯೊಡ್ಡಿದ್ದರು. ಅದೇ ವೇಳೆ ಒಳಗಿನಿಂದ ಬಾತ್‌ರೂಮ್ ಬಾಗಿಲನ್ನು ಮುರಿದ ಸಿಬ್ಬಂದಿ, ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

A 12-year-old teen in udupi, who locked himself inside the bathroom for hours together as he was disturbed with the fact that his mother took away his mobile phone on which he was playing games, was rescued from the fourth floor of the apartment building.