ನರ್ಸಿಂಗ್ ಕಾಲೇಜುಗಳಲ್ಲಿ ಕೊರೊನಾ ಹಾವಳಿ ; ಕೇರಳದ ವಿದ್ಯಾರ್ಥಿಗಳಿಗೇ ಹೆಚ್ಚು !!

04-01-21 04:01 pm       Mangalore Correspondent   ಕರಾವಳಿ

ನಗರದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಹೆಚ್ಚು ಕಾಣಿಸಿಕೊಂಡಿದೆ.  

Photo credits : Representative Image

ಮಂಗಳೂರು, ಜ.4 : ಕಾಲೇಜು ಆರಂಭಗೊಳ್ಳುತ್ತಿದ್ದಂತೆ ನಗರದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಹೆಚ್ಚು ಕಾಣಿಸಿಕೊಂಡಿದೆ.  ಬೆನ್ನು ಬೆನ್ನಿಗೆ ಮೂರು ನರ್ಸಿಂಗ್ ಕಾಲೇಜಿನಲ್ಲೂ ಕೊರೋನ ಹಾವಳಿ ಪತ್ತೆಯಾಗಿದೆ. ಕೇರಳ ಮೂಲದ ವಿದ್ಯಾರ್ಥಿಗಳು ನರ್ಸಿಂಗ್ ಕಾಲೇಜಿಗೆ ಬರುವ ಹಿನ್ನೆಲೆ ಅವರಲ್ಲಿಯೇ ಹೆಚ್ಚು ಪಾಸಿಟಿವ್ ಕಂಡುಬರುತ್ತಿದೆ.‌

ಕೊಟ್ಟಾರ ಚೌಕಿಯಲ್ಲಿ ಹಾಸ್ಟೆಲ್ ಹೊಂದಿರುವ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿ ಬಂದಿದೆ. ಈ ಕಾಲೇಜಿಗೆ ಮೊದಲ ಬ್ಯಾಚ್‌ನಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದರು. ಆದರೆ ಎರಡನೇ ಬ್ಯಾಚ್‌ನಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ನಡೆಸಿಲ್ಲ ಎನ್ನಲಾಗಿದೆ. ಇದರಿಂದ ಸಮಸ್ಯೆ ಉದ್ಭವಿಸಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

ಬ್ರಿಟನ್‌ನಿಂದ ಮಂಗಳೂರಿಗೆ ಒಂದು ತಿಂಗಳ ಅವಧಿಯಲ್ಲಿ ಆಗಮಿಸಿರುವ 118 ಮಂದಿಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರ ವರದಿ ನೆಗೆಟಿವ್ ಆಗಿದೆ. ಭಾನುವಾರ ಮೂರು ಮಂದಿಯ ವರದಿ ಬಂದಿದ್ದು, ರೂಪಾಂತರಿತ ವೈರಸ್ ಕಂಡುಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Nursing college students of Kerala are found highly infected by Covid-19 in Mangalore.