‘ಬಾಹುಬಲಿ’ ಚಿತ್ರದ ಶಿವಗಾಮಿಯ ರೀತಿ ಮಕ್ಕಳನ್ನು ಕೈಯಲ್ಲಿ ಹಿಡಿದೇ ಪ್ರಾಣಬಿಟ್ಟ ತಂದೆ !

05-01-21 12:44 pm       Mangalore Correspondent   ಕರಾವಳಿ

ಇಬ್ಬರು ಮಕ್ಕಳ ಜೊತೆ ದಂಪತಿ ನದಿಯಲ್ಲಿ ನೀರಾಟ ಆಡುತ್ತಿದ್ದಾಗ ಸಮುದ್ರದಲ್ಲಿ ನೀರಿನ ಏರಿಕೆಯಾಗಿ ಎಲ್ಲರೂ ಮುಳುಗಿದ್ದರು.

ಮಂಗಳೂರು, ಜ.5: ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಮಗುವನ್ನು ಕೈಯಲ್ಲಿ ಹಿಡಿದು ನದಿಯಲ್ಲಿ ಮುಳುಗಿದ್ದನ್ನು ಎಲ್ಲರೂ ನೋಡಿರುತ್ತೀರಿ. ಅಂಥದ್ದೇ ನೈಜ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಮಂಗಳೂರಿನ ಸಸಿಹಿತ್ಲು ಬಳಿ ಶಾಂಭವಿ ನದಿ ಸಮುದ್ರ ಸೇರುವಲ್ಲಿ ಡಿ.31ರಂದು ದುರಂತ ನಡೆದಿತ್ತು.

ಇಬ್ಬರು ಮಕ್ಕಳ ಜೊತೆ ದಂಪತಿ ನದಿಯಲ್ಲಿ ನೀರಾಟ ಆಡುತ್ತಿದ್ದಾಗ ಸಮುದ್ರದಲ್ಲಿ ನೀರಿನ ಏರಿಕೆಯಾಗಿ ಎಲ್ಲರೂ ಮುಳುಗಿದ್ದರು. ಈ ವೇಳೆ ದಂಪತಿ ಮತ್ತು ಮಕ್ಕಳಿಗೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ನದಿ ದಡದಲ್ಲೇ ಇದ್ದರೂ, ನೀರಿನ ಮಧ್ಯೆ ವಿಲ ವಿಲ ಒದ್ದಾಡುವಂತಾಗಿತ್ತು. ಮಕ್ಕಳು ಮುಳುಗುತ್ತಿರುವುದನ್ನು ಕಂಡ ಜಯರಾಮ ಗೌಡ, ಇಬ್ಬರು ಮಕ್ಕಳನ್ನೂ ಕೈಯಲ್ಲಿ ಮೇಲೆ ಹಿಡಿದು ತಾವು ನದಿ ತಳದಲ್ಲಿ ನಿಂತಿದ್ದರು. ಮಕ್ಕಳು ಮತ್ತು ತಾಯಿ ಬೊಬ್ಬಿಡುತ್ತಿರುವುದನ್ನು ಕೇಳಿದ, ಅಲ್ಲಿಯೇ ಸ್ವಲ್ಪ ದೂರದಲ್ಲಿ ಇದ್ದ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯರು ರಕ್ಷಣೆಗೆ ಧಾವಿಸಿದ್ದರು.

ಕೂಡಲೇ ಬೋಟ್ ಹಿಡಿದು ರಕ್ಷಣೆಗೆ ಧಾವಿಸಿದ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯ ಶ್ಯಾಮ್, ಜಯರಾಮ ಗೌಡರ ಕೈಯಲ್ಲಿದ್ದ ಇಬ್ಬರು ಮಕ್ಕಳನ್ನು ಮೊದಲು ರಕ್ಷಣೆ ಮಾಡಿದ್ದರು. ಆಬಳಿಕ ಮಹಿಳೆಯನ್ನು ಬೋಟಿಗೆ ಎಳೆಯಲು ಭಾರೀ ಶ್ರಮ ಪಟ್ಟಿದ್ದಾರೆ. ಧಡೂತಿ ದೇಹದ ಮಹಿಳೆಯಾಗಿದ್ದರಿಂದ ಅವರನ್ನು ಬೋಟಿಗೆ ಎಳೆಯುವುದು ಇಬ್ಬರಿದ್ದ ತಂಡಕ್ಕೆ ಸುಲಭದಲ್ಲಿ ಸಾಧ್ಯವಾಗಲಿಲ್ಲ. ತಾಯಿ, ಮಕ್ಕಳನ್ನು ರಕ್ಷಣೆ ಮಾಡುವಾಗ ಹತ್ತು ನಿಮಿಷ ಕಳೆದಿದ್ದು, ಈ ವೇಳೆ ಜಯರಾಮ ಗೌಡ ನೀರಿನಲ್ಲಿ ಮುಳುಗಿದ್ದಾರೆ.

ಮೊದಲೇ ನದಿ ನೀರಿನಲ್ಲಿ ಮುಳುಗಿದ್ದ ಜಯರಾಮ ಗೌಡ, ಮಕ್ಕಳನ್ನು ಮೇಲಕ್ಕೆ ಹಿಡಿದೇ ಪ್ರಾಣ ಬಿಟ್ಟಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಮಗುವನ್ನು ಹಿಡಿದುಕೊಂಡೇ ತೇಲಿಕೊಂಡು ಹೋದ ರೀತಿ ಜಯರಾಮ ಗೌಡ ಪ್ರಾಣ ಬಿಟ್ಟಿದ್ದು ನೆನಪಿಸುವಂತೆ ಅಲ್ಲಿನ ವಿಡಿಯೋ ಈಗ ವೈರಲ್ ಆಗುತ್ತಿದೆ. ಪುತ್ತೂರಿನ ಕಡಬ ನಿವಾಸಿಯಾಗಿದ್ದ ಜಯರಾಮ ಗೌಡ, ಮೂಲ್ಕಿ ಮೂಲಕ ಸಸಿಹಿತ್ಲು ಕಡಲ ತೀರಕ್ಕೆ ಆಗಮಿಸಿದ್ದರು. ಹೊಸ ವರ್ಷಕ್ಕೆ ಬೀಚ್ ಇಳಿಯಬಾರದೆಂದು ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಾಟವಾಡಲು ತೊಡಗಿದ್ದರು. ಆದರೆ, ವಿಧಿಯಾಟವೇ ಬೇರೆಯದ್ದೇ ಆಗಿತ್ತು. ನದಿಯೇ ದುರಂತಕ್ಕೆ ಆಹ್ವಾನಿಸಿತ್ತು. 

Video: 

In a heartbreaking incident father saved his little daughter and drows in Shambhavi river in Mangalore. The incident took place while they were playing in water and water level increased.