450 ಕಿಮೀ ಉದ್ದದ ಕೊಚ್ಚಿ- ಮಂಗಳೂರು ಗ್ಯಾಸ್ ಪೈಪ್ ಲೈನ್ ಯೋಜನೆಗೆ ಚಾಲನೆ

05-01-21 01:52 pm       Mangalore Correspondent   ಕರಾವಳಿ

ನೈಸರ್ಗಿಕ ಅನಿಲ ಸರಬರಾಜು ಮಾಡುವ ಗೈಲ್ ಗ್ಯಾಸ್ ಪೈಪ್ ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಮಂಗಳೂರು, ಜ.5: ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡುವ ಗೈಲ್ ಗ್ಯಾಸ್ ಪೈಪ್ ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಪಣಂಬೂರಿನ ಎಂಸಿಎಫ್ ಆವರಣದಲ್ಲಿ ವಿಡಿಯೋ ಕಾನ್ಪರೆನ್ಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಂಗಳೂರು, ಬೆಂಗಳೂರು, ದೆಹಲಿ, ತಿರುವನಂತಪುರದಲ್ಲಿ ಇಂಟರ್ ಕನೆಕ್ಟ್ ಮೂಲಕ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮ ನಡೆದಿದ್ದು ರಾಜಧಾನಿ ದೆಹಲಿಯಿಂದ ಪ್ರಧಾನಿ ಮೋದಿ ದೇಶದ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.

ಪೈಪ್ ಲೈನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, 450 ಕಿಮೀ ಉದ್ದದ ಗ್ಯಾಸ್ ಪೈಪ್ ಲೈನ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲು ಹೆಮ್ಮೆಯಾಗುತ್ತಿದೆ. ದೇಶದ ಪಾಲಿಗೆ ಇಂದಿನ ದಿನ ಅತಿ ಮಹತ್ವದ್ದು. ಅದರಲ್ಲಿಯೂ ಕೇರಳ ಮತ್ತು ಕರ್ನಾಟಕದ ಜನತೆಯ ಪಾಲಿಗೆ ಅತಿ ಮಹತ್ವದ ವಿಚಾರ ಎಂದು ಹೇಳಿದರು. ಕಳೆದ ಆರು ವರ್ಷಗಳ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಮೆಟ್ರೋ, ವಿಮಾನ, ಡಿಜಿಟಲ್ ಮತ್ತು ಗ್ಯಾಸ್ ಸಂಪರ್ಕ ಜಾಲದಲ್ಲಿ ದೇಶ ಅತ್ಯಂತ ಪರಿಣಾಮಕಾರಿ ಅಭಿವೃದ್ಧಿಯನ್ನು ಕಂಡಿದೆ. ಈಗ ಇಡೀ ದೇಶಕ್ಕೆ ಒಂದು ಗ್ಯಾಸ್ ಪೈಪ್ ಲೈನ್ ಸಂಪರ್ಕಿಸುವ ಜಾಲಕ್ಕೆ ಮೊದಲ ಹೆಜ್ಜೆ ಇಡಲಾಗಿದೆ ಎಂದರು.

ಮುಂದಿನ 5-6 ವರ್ಷಗಳಲ್ಲಿ ಗ್ಯಾಸ್ ಪೈಪ್ ಲೈನ್ ನೆಟ್ವರ್ಕ್ ಡಬಲ್ ಆಗಲಿದ್ದು, ಸುಮಾರು 32 ಸಾವಿರ ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಳ್ಳಲಿದೆ. ಇದೇ ವೇಳೆ, ಗುಜರಾತ್ ನಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಗಾಳಿ ಮತ್ತು ಸೋಲಾರ್ ನಿಂದ ವಿದ್ಯುತ್ ಉತ್ಪಾದಿಸುವ ಘಟಕ ಕಾರ್ಯಾರಂಭಿಸಲಿದೆ. ವಿದ್ಯುತ್ ಸ್ವಾವಲಂಬನೆಯ ಮಧ್ಯೆ ಬಯೋ ಅನಿಲದಲ್ಲೂ ಸ್ವಾವಲಂಬನೆ ಮತ್ತು ಪೂರೈಕೆ ಜಾಲ ವಿಸ್ತರಿಸುವ ಗುರಿಯಿದೆ. ಇನ್ನು ಹತ್ತು ವರ್ಷಗಳಲ್ಲಿ ಪೆಟ್ರೋಲ್ ಬದಲಿಗೆ ಕಬ್ಬು ಮತ್ತಿತರ ಜೈವಿಕ ಉತ್ಪನ್ನಗಳಿಂದ ಬಯೋ ಗ್ಯಾಸ್ ಉತ್ಪಾದನೆಯಾಗಲಿದ್ದು, ದೇಶದ ಒಟ್ಟು ಬೇಡಿಕೆಯ ಶೇ.20ರಷ್ಟನ್ನು ಪೂರೈಸಲಿದೆ. ಇದರಿಂದ ಪೆಟ್ರೋಲಿಯಂ ಆಮದಿಗೆ ಕಡಿವಾಣ ಬೀಳುವ ಜೊತೆಗೆ ಕಾರ್ಬನ್ ಅಂಶ ವಾತಾವರಣ ಸೇರುವುದನ್ನು ನಿಯಂತ್ರಣಕ್ಕೆ ಬರಲಿದೆ ಎಂದು ಮೋದಿ ಹೇಳಿದರು.

1992ರಿಂದ 2014ರ ವರೆಗೆ ಕೇವಲ 900 ಸಿಎನ್ ಜಿ ಸ್ಟೇಶನ್ ಗಳನ್ನು ದೇಶದಲ್ಲಿ ಸ್ಥಾಪನೆ ಮಾಡಲಾಗಿತ್ತು. ಕಳೆದ ಆರು ವರ್ಷಗಳಲ್ಲಿ 1500 ಹೊಸ ಸ್ಟೇಶನ್ ಆರಂಭಿಸಲಾಗಿದೆ. ದೇಶಾದ್ಯಂತ ವಾಹನಗಳಿಗೆ ಅನಿಲ ಒದಗಿಸಬಲ್ಲ ಹತ್ತು ಸಾವಿರ ಸಿಎನ್ ಜಿ ಸ್ಟೇಶನ್ ಗಳನ್ನು ಆರಂಭಿಸುವ ಗುರಿ ಇದೆ. 2014ರ ವರೆಗೆ 25 ಲಕ್ಷ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಮಾಡಲಾಗಿತ್ತು. ಈಗ ಅದರ ಸಂಖ್ಯೆ 72 ಲಕ್ಷಕ್ಕೆ ಏರಿಕೆಯಾಗಿದೆ. 2014ರ ಹಿಂದಿನ ಅಭಿವೃದ್ಧಿ ಗತಿಯನ್ನು ಕಳೆದ ಆರು ವರ್ಷಗಳಿಗೆ ಹೋಲಿಸಲು ಸಾಧ್ಯವಿಲ್ಲ. ಅದನ್ನು ಹೋಲಿಕೆ ಮಾಡುವುದಕ್ಕೂ ಬಯಸುವುದಿಲ್ಲ ಎಂದು ಮೋದಿ ಹಿಂದಿನ ಯುಪಿಎ ಸರಕಾರದ ಆಡಳಿತಕ್ಕೆ ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ಕೇರಳ ಮತ್ತು ಕರ್ನಾಟಕದ ರಾಜ್ಯಪಾಲರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ, ದೆಹಲಿಯಲ್ಲಿ ಮೋದಿ ಜೊತೆಗೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು. ಆಯಾ ಭಾಗದಲ್ಲಿ ಅಧಿಕಾರಿಗಳು, ಸ್ಥಳೀಯ ಶಾಸಕರು, ಸಂಸದರು ಉಪಸ್ಥಿತಿ ಹೊಂದಿದ್ದರು.

ಕೊಚ್ಚಿಯಿಂದ ಮಂಗಳೂರು ಗ್ಯಾಸ್ ಪೈಪ್ ಲೈನ್ 450 ಕಿಮೀ ಉದ್ದದ ಯೋಜನೆಗೆ ಮೂರು ಸಾವಿರ ಕೋಟಿ ವೆಚ್ಚ ತಗಲಿದೆ. ಈಗಾಗ್ಲೇ ಗ್ಯಾಸ್ ಬರಲು ಆರಂಭಿಸಿದ್ದು, ಮಂಗಳೂರಿನ ಎಂಸಿಎಫ್ ನಲ್ಲಿ ಗ್ಯಾಸ್ ಆಧರಿತ ಯೂರಿಯಾ ಗೊಬ್ಬರ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಅದೇ ಕಾರಣಕ್ಕೆ ಮಂಗಳೂರಿನ ಎಂಸಿಎಫ್ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

Prime Minister Narendra Modi dedicated to the nation the Kochi-Mangaluru natural gas pipeline of GAIL (India) Limited on Tuesday January 5, 2021, through video conferencing.