ಗ್ರಾಹಕ ಕೇಂದ್ರಕ್ಕೆ ದೂರು ; ಹಾಳಾದ ಸ್ಯಾಮ್ಸಂಗ್ ಟಿವಿ ಬದಲು ಹೊಸ ಟಿವಿ ಪಡೆದ ಗ್ರಾಹಕ ! 

06-01-21 08:18 pm       Mangaluru Correspondent   ಕರಾವಳಿ

ಹೊಚ್ಚ ಹೊಸ ಟಿವಿ ಒಂದೇ ವರ್ಷದಲ್ಲಿ ಹಾಳಾಗಿದ್ದರಿಂದ ಬೇಸತ್ತ ಗ್ರಾಹಕರೊಬ್ಬರು ಲೀಗಲ್ ನೋಟಿಸ್ ಜಾರಿಗೊಳಿಸಿ, ಅದೇ ಕಂಪನಿಯ ಹೊಸ ಟಿವಿ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. 

ಮಂಗಳೂರು, ಜ.6: ಹೊಚ್ಚ ಹೊಸ ಟಿವಿ ಒಂದೇ ವರ್ಷದಲ್ಲಿ ಹಾಳಾಗಿದ್ದರಿಂದ ಬೇಸತ್ತ ಗ್ರಾಹಕರೊಬ್ಬರು ಲೀಗಲ್ ನೋಟಿಸ್ ಜಾರಿಗೊಳಿಸಿ, ಅದೇ ಕಂಪನಿಯ ಹೊಸ ಟಿವಿ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. 

ಮಂಗಳೂರಿನ ಪ್ರತಿಷ್ಠಿತ ಪತ್ರಿಕೆಯೊಂದರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಹಕರೊಬ್ಬರು ಕಳೆದ ವರ್ಷ ಹೊಚ್ಚ ಹೊಸ ಸ್ಯಾಮ್‌ಸಂಗ್ ಟಿವಿಯೊಂದನ್ನು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಇರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಖರೀದಿಸಿದ್ದರು. 39 ಸಾವಿರ ರೂ. ಬೆಲೆ ನೀಡಿದ್ದ ಸ್ಯಾಮ್‌ಸಂಗ್ ಟಿವಿ 10 ತಿಂಗಳಲ್ಲಿ ಕೆಟ್ಟು ಹೋಗಿತ್ತು.

ಈ ಬಗ್ಗೆ ಅವರು ರಿಲಯನ್ಸ್ ಡಿಜಿಟಲ್‌ಗೆ ದೂರು ಸಲ್ಲಿಸಿದ್ದರು. ಬಳಿಕ ಇದನ್ನು ಸಂಬಂಧಪಟ್ಟ ಸೇವಾ ಕೇಂದ್ರಕ್ಕೆ ರಿಲಯನ್ಸ್ ಮಳಿಗೆಯವರು ಕಳುಹಿಸಿದ್ದರು. 

ಆದರೆ, ನಾಲ್ಕು ದಿನದಲ್ಲಿ ಟಿವಿಯನ್ನು ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದ ಸೇವಾ ಕೇಂದ್ರ ವಾರವಾದರೂ ಈ ಬಗ್ಗೆ ಸ್ಪಂದನೆ ಮಾಡಿರಲಿಲ್ಲ.

ಸಾಕಷ್ಟು ಇಮೇಲ್, ದೂರವಾಣಿ ಕರೆ ಬಳಿಕ ಬೇಸತ್ತ ಗ್ರಾಹಕರು ಸ್ಯಾಮ್‌ಸಂಗ್ ಮತ್ತು ರಿಲಯನ್ಸ್ ಡಿಜಿಟಲ್‌ಗೆ ಲೀಗಲ್ ನೋಟಿಸ್ ಜಾರಿಗೊಳಿಸಿದರು. ಜೊತೆಗೆ ಗ್ರಾಹಕ ಕೇಂದ್ರಕ್ಕೆ ದೂರನ್ನೂ ಸಲ್ಲಿಸಿದರು. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸ್ಯಾಮ್ ಸಂಗ್ ಕಂಪೆನಿ ಹೊಸ ಟಿವಿಯೊಂದನ್ನು ನೀಡಿ ಇಡೀ ಪ್ರಕರಣಕ್ಕೆ ಸುಖಾಂತ್ಯ ಹಾಡಿದೆ.