15 ದಿನಗಳಲ್ಲಿ ಮರಳು ಪರವಾನಗಿ ; ಮಣ್ಣು ದಂಧೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ, ಅಕ್ರಮ ಪತ್ತೆಗೆ 196 ಸಿಸಿಟಿವಿ

07-01-21 05:13 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 15 ದಿನಗಳ ಒಳಗೆ ಮರಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿ.ಸಿ.ಪಾಟೀಲ್ ಹೇಳಿದ್ದಾರೆ. 

ಮಂಗಳೂರು, ಜ.7 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 15 ದಿನಗಳ ಒಳಗೆ ಮರಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಗುರುತಿಸಲಾದ 30 ಬ್ಲಾಕ್ ಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗುವುದು. ಸಿಆರ್ ಝಡ್ ಪ್ರದೇಶದಲ್ಲಿ 104 ಕುಟುಂಬಗಳಿಗೆ ಮರಳು ತೆಗೆಯಲು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಸರಕಾರಿ ಪ್ರದೇಶದಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುವುದರ ಬಗ್ಗೆ ಈಗಾಗ್ಲೇ ತನಿಖೆಗೆ ಸೂಚನೆ ನೀಡಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಮಂಗಳೂರಿನ ಮುಡಿಪು ಭಾಗದಿಂದ ತಮಿಳುನಾಡು, ಆಂಧ್ರಪ್ರದೇಶದ ಸಿಮೆಂಟ್ ಕಾರ್ಖಾನೆಗಳಿಗೆ ಕೆಂಪು ಮುರ ಮಣ್ಣು ಸಾಗಾಟದ ವಿರುದ್ಧ ಸಂಪೂರ್ಣ ಕಡಿವಾಣ ಹಾಕಲಾಗುವುದು. ಈ ದಂಧೆಯ ಬಗ್ಗೆ ಈಗಾಗ್ಲೇ ತನಿಖೆಗೆ ಆದೇಶ ಮಾಡಿದ್ದು ಅಕ್ರಮ ದಂಧೆ ಎಸಗಿದವರು ಎಷ್ಟೇ ಪ್ರಭಾವಿಗಳಾಗಿರಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ಅಂತರಾಜ್ಯ ಅಕ್ರಮ ಮರಳು ಸಾಗಾಟ ತಡೆಗೆ ಕ್ರಮ ಕೈ ಗೊಳ್ಳಲಾಗುವುದು. ಗಡಿ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಟವನ್ನು ಪತ್ತೆ ಮಾಡಲು 196 ಸಿ.ಸಿ. ಕ್ಯಾಮರಾ ಅಳವಡಿಸಲಾಗುವುದು. ಜಿಲ್ಲಾಡಳಿತ ಮತ್ತು ಗಣಿ ಇಲಾಖೆಯ ಸಹಯೋಗದಲ್ಲಿ ಸಿಸಿಟಿವಿ ಅಳವಡಿಕೆ ಆಗಲಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ಕೆ.ವಿ‌.ರಾಜೇಂದ್ರ, ಉಡುಪಿ ಜಿಲ್ಲಾಧಿಕಾರಿ ಡಾ.ಜಗದೀಶ್, ದ.ಕ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಲಕ್ಷ್ಮೀ ಪ್ರಸಾದ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ವಿಷ್ಣುವರ್ಧನ್, ಶಾಸಕ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Minister of Mines and Geology C C Patil has assured of Sand Mining to start within 15 days in Mangalore.