ಕೊರೊನಾ ನಿರ್ಬಂಧ ಉಲ್ಲಂಘನೆ ; ಮದುವೆ ಹಾಲ್ ಗೆ 5 ಸಾವಿರ ದಂಡ

08-01-21 05:41 pm       Mangalore Correspondent   ಕರಾವಳಿ

ಕೊರೊನಾ ನಿರ್ಬಂಧಗಳಿದ್ದರೂ, ಜನರು ಈಗ ಅದನ್ನು ಗಣನೆಗೆ ತೆಗೆಯುವುದನ್ನು ಮರೆತು ಬಿಟ್ಟಿದ್ದಾರೆ. ಇಂಥ ನಿರ್ಲಕ್ಷ್ಯವನ್ನು ಮನಗಂಡ ಮಂಗಳೂರು ಮ.ನ.ಪಾ. ಅಧಿಕಾರಿಗಳು ಈಗ ದಂಡ ಬೀಸಲು ಆರಂಭಿಸಿದ್ದಾರೆ.

ಮಂಗಳೂರು, ಜ.8: ಕೊರೊನಾ ನಿರ್ಬಂಧಗಳಿದ್ದರೂ, ಜನರು ಈಗ ಅದನ್ನು ಗಣನೆಗೆ ತೆಗೆಯುವುದನ್ನು ಮರೆತು ಬಿಟ್ಟಿದ್ದಾರೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಕೂಡ ಮಾಯವಾಗಿದೆ. ಮದುವೆ ಸಮಾರಂಭಗಳಲ್ಲಂತೂ 150 ಜನರು ಮಾತ್ರ ಸೇರಬೇಕೆಂದಿದ್ದರೂ, ದೊಡ್ಡ ಹಾಲ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಸೇರುತ್ತಿದ್ದಾರೆ. ಇಂಥ ನಿರ್ಲಕ್ಷ್ಯವನ್ನು ಮನಗಂಡ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಈಗ ದಂಡ ಬೀಸಲು ಆರಂಭಿಸಿದ್ದಾರೆ.

ಜ.7ರಂದು ಕಂಕನಾಡಿಯ ವೆಲೆನ್ಸಿಯಾ ಚರ್ಚ್ ಹಾಲ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಲ್ಲದೆ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ವಿಚಾರದಲ್ಲಿ ಪಾಲಿಕೆಯ ಅಧಿಕಾರಿಗಳು 5 ಸಾವಿರ ರೂ. ದಂಡ ಹಾಕಿದ್ದಾರೆ. ಜನರ ತಪ್ಪೇ ಆಗಿದ್ದರೂ, ಸಂಬಂಧಪಟ್ಟ ಹಾಲ್ ನವರು ಈ ಬಗ್ಗೆ ಶಿಸ್ತು ರೂಪಿಸಬೇಕು, ಅಂತರ ಕಾಯ್ದುಕೊಂಡು ಚೇರ್ ಇರಿಸಬೇಕೆಂದು ಜಿಲ್ಲಾಧಿಕಾರಿಗಳು ನಿಯಮ ರೂಪಿಸಿದ್ದಾರೆ. ಅದರಂತೆ, ಸೀಮಿತ ಸಂಖ್ಯೆಯಲ್ಲಿ ಜನ ಸೇರಬೇಕು, ಎಲ್ಲರೂ ಮಾಸ್ಕ್ ಧರಿಸಿರಬೇಕು ಎಂಬ ಷರತ್ತುಗಳನ್ನೂ ಹೇರಲಾಗಿದೆ.

ಹೀಗಿದ್ದರೂ, ಹಾಲ್ ಸಂಬಂಧಪಟ್ಟವರಾಗಲೀ, ಮದುವೆ ನಡೆಸುವ ಪಾರ್ಟಿಯಾಗಲೀ ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ. ಕಂಕನಾಡಿಯ ಸಮೃದ್ಧಿ ಹಾಲ್ ನಲ್ಲಿ ಕೂಡ ಇದೇ ರೀತಿಯ ಉಲ್ಲಂಘನೆ ಆಗಿದ್ದರಿಂದ ಅಲ್ಲಿಯೂ ದಂಡ ವಿಧಿಸಲಾಗಿದೆ. ಆದರೆ, ಹಾಲ್ ಸಂಬಂಧಿತರು ಮಾತ್ರ ಈ ಬಗ್ಗೆ ಗರಂ ಆಗಿದ್ದಾರೆ. ಎಲ್ಲ ಹಾಲ್ ಗಳಲ್ಲಿಯೂ ಇಂಥ ಉಲ್ಲಂಘನೆ ಆಗುತ್ತದೆ. ಪಾಲಿಕೆಯವರು ಎಲ್ಲ ಕಡೆಯೂ ದಂಡ ವಿಧಿಸಲಿ ಎಂದು ಹೇಳಿದ್ದಾರೆ. 

The Mangalore city corporation has imposed a fine of Rs 5000 to Valencia church hall for violating covid rule.