ಅಲ್ಲಿನ ಗುಳಿಗನಿಗೆ ಪೊಲೀಸ್ ಠಾಣೆ ಲೆಕ್ಕದಲ್ಲೇ ಪ್ರತಿ ವರ್ಷ ಕೋಲದ ಸೇವೆ !!

09-01-21 03:01 pm       Mangalore Correspondent   ಕರಾವಳಿ

ಸ್ವತಃ ಪೊಲೀಸ್ ಇಲಾಖೆಯವರೇ ಸೇರಿಕೊಂಡು ಪ್ರತಿ ವರ್ಷ ಕೋಲ ಒಪ್ಪಿಸುವುದನ್ನು ವಾಡಿಕೆಯಾಗಿ ನಡೆಸಿಕೊಂಡು ಬಂದಿದ್ದಾರೆ. 

ಮಂಗಳೂರು, ಜ.9: ಕರಾವಳಿಯಲ್ಲಿ ದೈವಗಳ ಕಾರಣಿಕ ನಂಬದವರಿಲ್ಲ. ಕಷ್ಟಕಾಲದಲ್ಲಿ ಕೈಮುಗಿದು ಬೇಡಿಕೊಂಡರೆ ಕೈಹಿಡಿಯುತ್ತವೆ ಅನ್ನೋ ಅಚಲ ನಂಬಿಕೆ ಜನರದ್ದು. ಈ ನಂಬಿಕೆಗೆ ಪೊಲೀಸರು, ಆಡಳಿತ ವರ್ಗವೂ ಹೊರತಾಗಿಲ್ಲ. ಆದರೆ, ಇಲ್ಲೊಂದು ಕಡೆ ಸ್ವತಃ ಪೊಲೀಸ್ ಇಲಾಖೆಯವರೇ ಸೇರಿಕೊಂಡು ಪ್ರತಿ ವರ್ಷ ಕೋಲ ಒಪ್ಪಿಸುವುದನ್ನು ವಾಡಿಕೆಯಾಗಿ ನಡೆಸಿಕೊಂಡು ಬಂದಿದ್ದಾರೆ. 

ಹೌದು.. ಕಾರ್ಕಳ ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರೇ ಸೇರಿಕೊಂಡು ಗುಳಿಗ ದೈವಕ್ಕೆ ಹರಕೆ ಕೋಲ ಒಪ್ಪಿಸುತ್ತಾರೆ. ಕುಕ್ಕಂದೂರಿನ ಪೊಲೀಸ್ ವಸತಿ ಗೃಹದ ಬಳಿಯ ಹುಡ್ಕೋ ಕಾಲನಿಯಲ್ಲಿ ಇರುವ ಗುಳಿಗ ದೈವಕ್ಕೆ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಈ ರೀತಿ ಕೋಲದ ಹರಕೆ ಒಪ್ಪಿಸುವುದು ವಾಡಿಕೆಯಾಗಿ ಬಂದಿದೆ. ಕಳೆದ ಬಾರಿ ಲಾಕ್ಡೌನ್ ಇದ್ದುದರಿಂದ ಎಪ್ರಿಲ್, ಮೇ ತಿಂಗಳಲ್ಲಿ ವರ್ಷಾವಧಿ ಕೋಲ ಸೇವೆಗಳು ನಡೆದಿರಲಿಲ್ಲ. ಪೊಲೀಸರ ಕೋಲ ಸೇವೆ ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ನಡೆಯುವುದಿತ್ತು. ಕಳೆದ ಬಾರಿ ಉಳಿಕೆಯಾಗಿದ್ದ ಹರಕೆ ಸೇವೆಯನ್ನು ಇಂದು ರಾತ್ರಿ (ಜ.9, ಶನಿವಾರ) ಪೊಲೀಸರು ಒಪ್ಪಿಸುತ್ತಿದ್ದಾರೆ.

ಹುಡ್ಕೋ ಕಾಲನಿಯಲ್ಲಿರುವ ಗುಳಿಗ ದೈವದ ಕಟ್ಟೆ ಮತ್ತು ಅದರ ಭಂಡಾರ ಜೈನ ಮನೆತನದ ಉಸ್ತುವಾರಿಯಲ್ಲಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಮನೆಯವರ ಲೆಕ್ಕದಲ್ಲಿ ಕೋಲ ಒಪ್ಪಿಸಿ, ಬಳಿಕ ಸರದಿಯಂತೆ ಮೇ ತಿಂಗಳ ವರೆಗೂ ಕೋಲ ಸೇವೆ ನಡೆಯುತ್ತದೆ. ಈ ಬಾರಿಯೂ ವಾರ್ಷಿಕ ಸೇವೆ ನಡೆದು ಹರಕೆ ಕೋಲಗಳು ಆರಂಭಗೊಂಡಿವೆ. ಕಾರ್ಕಳ ಪೊಲೀಸ್ ಠಾಣೆ, ತಾಲೂಕು ಆಡಳಿತ, ರೆವಿನ್ಯೂ ಇಲಾಖೆ ಹೀಗೆ ಸರಕಾರಿ ವ್ಯವಸ್ಥೆಯಿಂದಲೇ ಗುಳಿಗನಿಗೆ ಹಲವಾರು ಹರಕೆ ಕೋಲ ಸಮರ್ಪಣೆಯಾಗುವುದು ಅಲ್ಲಿನ ವಿಶೇಷ.

ಹರಕೆ ಸೇವೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಎಲ್ಲ ಸಿಬಂದಿ ಮತ್ತು ಅವರ ಕುಟುಂಬಸ್ಥರು ಪಾಲ್ಗೊಳ್ಳುತ್ತಾರೆ. ಮಾಹಿತಿ ಪ್ರಕಾರ, ಕಳೆದ 40 ವರ್ಷಗಳಿಂದಲೂ ಈ ರೀತಿ ಪೊಲೀಸರು ಗುಳಿಗನಿಗೆ ಪ್ರತಿವರ್ಷ ಕೋಲ ಸೇವೆ ಅರ್ಪಿಸುತ್ತಿದ್ದಾರೆ. ಇದರ ಖರ್ಚನ್ನು ಪೊಲೀಸ್ ಸಿಬಂದಿಯೇ ಸೇರಿಕೊಂಡು ಭರಿಸುತ್ತಾರೆ. ಹರಕೆ ಸೇವೆಯ ಜೊತೆಗೆ ಸೇರಿದ ಸಾರ್ವಜನಿಕರು ಮತ್ತು ಪೊಲೀಸ್ ಸಿಬಂದಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಊಟ, ಹರಕೆ ಸೇವೆಗಳಿಗೆ ಸುಮಾರು 50 ಸಾವಿರಕ್ಕಿಂತ ಹೆಚ್ಚು ಖರ್ಚು ಬರುತ್ತಿದ್ದು ಪ್ರತಿ ವರ್ಷ ನಿಷ್ಠೆಯಿಂದ ನಡೆಸಿಕೊಂಡು ಬಂದಿದ್ದಾರೆ.

ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರಲ್ಲಿ ಕೇಳಿದರೆ, ಅಲ್ಲಿನ ಗುಳಿಗನಿಗೆ ಭಾರೀ ಕಾರಣಿಕ ಇದೆ. ಮೊದಲಿನಿಂದಲೂ ಪ್ರತಿವರ್ಷ ಈ ಸೇವೆ ನಡೆಸುತ್ತಾ ಬರಲಾಗಿದೆ. ನಮ್ಮ ಲೆಕ್ಕದಲ್ಲಿ ಕೋಲದ ಹರಕೆ ನೀಡುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹಿಂದೆಲ್ಲಾ ಏನಾದ್ರೂ ತಪ್ಪಿಸಿಕೊಂಡು ಹೋದರೆ, ಶಸ್ತ್ರಾಸ್ತ್ರಗಳು ಕಾಣೆಯಾದರೆ ಗುಳಿಗನಿಗೆ ಹರಕೆ ಹೇಳಿದರೆ, ಕೋಲದ ಸಂದರ್ಭ ಕೇಳಿಕೊಂಡಿದ್ದ ವೇಳೆ ಅದು ಪತ್ತೆಯಾದ ಉದಾಹರಣೆಗಳಿವೆ. ಇದರಿಂದ ಹರಕೆ ಕೋಲ ನೀಡುವ ಸಂಪ್ರದಾಯ ಬೆಳೆದು ಬಂದದ್ದಿರಬೇಕು ಎಂದು ಹೇಳುತ್ತಾರೆ. 

Karkala Police personals offer kola in the aspect of vow