ತೊಕ್ಕೊಟ್ಟು ಬೀಫ್ ಸ್ಟಾಲ್ ಗೆ ಬೆಂಕಿ ; ಆರೋಪಿಗಳನ್ನ ಮೂರು‌ ದಿನಗಳಲ್ಲಿ ಬಂಧಿಸದಿದ್ದರೆ ಪ್ರತಿಭಟನೆ

09-01-21 05:16 pm       Mangalore Correspondent   ಕರಾವಳಿ

ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನ ಮೂರು ದಿವಸಗಳೊಳಗೆ ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸೋದಾಗಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. 

ಉಳ್ಳಾಲ, ಜ.9: ತೊಕ್ಕೊಟ್ಟು ಒಳಪೇಟೆಯ ಮೂರು ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನ ಮೂರು ದಿವಸಗಳೊಳಗೆ ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸೋದಾಗಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ. 

ಕಿಡಿಗೇಡಿಗಳಿಂದ ಬೆಂಕಿ ಹಚ್ಚಲ್ಪಟ್ಟ ತೊಕ್ಕೊಟ್ಟು ಒಳಪೇಟೆಯ ಕಸಾಯಿ ಖಾನೆಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನೇತೃತ್ವದ ತಂಡ ಭೇಟಿ ನೀಡಿತು. 

ಈ ವೇಳೆ ಮಾತನಾಡಿದ ಸಂತೋಷ್ ಕುಮಾರ್ ಶೆಟ್ಟಿ ಅವರು, ಬೀಫ್ ವ್ಯಾಪಾರಸ್ಥರ ಕುಟುಂಬ ಕಳೆದ 75 ವರ್ಷದಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದು, ಕಳೆದ ರಾತ್ರಿ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬಡ ವ್ಯಾಪಾರಿಗಳಿಗೆ ದಿಕ್ಕು ತೋಚದಂತೆ ಆಗಿದೆ. ಏಕಾಏಕಿ ಬಂದು ಬೆಂಕಿ ಹಚ್ಚಿದ್ದರಿಂದ ಅವರು ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು? ಅವರ ಕುಟುಂಬ ಬೀದಿಗೆ ಬಂದಿದೆ. ಮೂರು ದಿನದೊಳಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕು. ಇಲ್ಲವಾದ್ದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಸೋಮೇಶ್ವರ ವಲಯ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಗಟ್ಟಿ, ಕಾಂಗ್ರೆಸ್ ಪ್ರಮುಖರಾದ ಪದ್ಮನಾಭ ಉಳ್ಳಾಲ್, ರಿಚರ್ಡ್ ಉಳ್ಳಾಲ್, ನಗರಸಭೆ ಸದಸ್ಯ ರವಿಚಂದ್ರ ಗಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಯೂತ್ ಇಂಟಕ್ ಅಧ್ಯಕ್ಷ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ ಮುಕ್ತಾರ್, ಉಪಾಧ್ಯಕ್ಷರಾದ ಸಿರಾಜ್, ತಾಜುದ್ದೀನ್, ಕೋಟೆಕಾರ್ ಗ್ರಾಮ ಯೂತ್ ಇಂಟಕ್ ಅಧ್ಯಕ್ಷ ಆಸಿಫ್ ಹಾಗೂ ನಿಯಾಝ್ ಉಪಸ್ಥಿತರಿದ್ದರು.

Ullal fire to beef stalls miscreants who set fire to Beef stall in Ullal be arrested in 3 days warns congress leader santosh Kumar.