ಎಸ್‌ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರನ್ನು ಕೈಬಿಡಲು ಬಿಜೆಪಿಗರಿಂದಲೇ ಅರ್ಜಿ ಸಲ್ಲಿಕೆ, ಕ್ರಿಮಿನಲ್ ಕೇಸು ದಾಖಲಿಸಲು ಡೀಸಿಗೆ ದೂರು

05-10-26 10:53 pm       Mangaluru Staffer   ಕರಾವಳಿ

ಎಸ್‌ಐಆರ್ ಫಾರ್ಮ್ 7ನ್ನು ದುರುಪಯೋಗಪಡಿಸಿ ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಮುಖರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಮಂಗಳೂರು, ಅ.5: ಎಸ್‌ಐಆರ್ ಫಾರ್ಮ್ 7ನ್ನು ದುರುಪಯೋಗಪಡಿಸಿ ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಮುಖರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. 

ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರಿಗೆ ಮನವಿ ಸಲ್ಲಿಸಿದ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಸುದ್ದಿಗಾರರ ಜತೆ ಮಾತನಾಡಿ, ಮುಸ್ಲಿಮರು ಹಾಗೂ ಕ್ರೈಸ್ತ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಬಿಜೆಪಿ ಕಚೇರಿಯಿಂದಲೇ ಪೂರ್ವ ಮುದ್ರಿತ ಫಾರಂ 7 ಅನ್ನು ಸಲ್ಲಿಸಲಾಗಿದೆ. ಈ ಬಗ್ಗೆ ದಾಖಲೆ ಲಭ್ಯವಾಗಿದ್ದು ಕೃತ್ಯ ಎಸಗಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಫಾರಂ 7ರಲ್ಲಿ ಸಲ್ಲಿಕೆಯಾಗಿರುವ ದೊಡ್ಡ ಪ್ರಮಾಣದ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಬೇಕು. ಒಂದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಯಿಂದ ಅಸಾಮಾನ್ಯ ಪ್ರಮಾಣದಲ್ಲಿ ಫಾರಂ 7 ಅರ್ಜಿಗಳನ್ನು ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ವಿಶೇಷವಾಗಿ ಪರಿಶೀಲಿಸಬೇಕು. ಬೆಳ್ತಂಗಡಿಯ ಬೆರಳೆಣಿಕೆಯ ಬೂತ್ಗಳಲ್ಲಿಯೇ ಒಟ್ಟು 275 ಹಾಗೂ ಪುತ್ತೂರಿನಲ್ಲಿ 2 ಬೂತ್ ಗಳಲ್ಲಿಯೇ 19 ಅಲ್ಪಸಂಖ್ಯಾತ ಮತದಾರರ ಹೆಸರು ಕೈಬಿಡಲು ಬಿಜೆಪಿ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದೆ ಎಂದು ಶಾಹುಲ್ ಹಮೀದ್ ಹೇಳಿದರು. 

ಮತದಾರರ ಪಟ್ಟಿಯಲ್ಲಿ ನೋಂದಾಯಿತ ವ್ಯಕ್ತಿಯ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ ಅಂತಹ ಅರ್ಜಿಯಲ್ಲಿ ಅರ್ಜಿದಾರರು ನೀಡುವ ಕಾರಣಕ್ಕೆ ಸಂಬಂಧಿಸಿ ಸಾಕ್ಷ್ಯವನ್ನು ಒದಗಿಸುವ ಹೊಣೆಗಾರಿಕೆ ಅರ್ಜಿದಾರರದ್ದೇ ಆಗಿರುತ್ತದೆ ಎಂದು ಫಾರಂ-7 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಪಕ್ಷದ ಲೆಟರ್ ಹೆಡ್ ನಲ್ಲಿಯೇ ಅಲ್ಪಸಂಖ್ಯಾತ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲು ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಶಾಹುಲ್ ಹಮೀದ್ ಹೇಳಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಕಾಶ್ ಸಿಕ್ವೇರಾ, ಉಪಾಧ್ಯಕ್ಷರಾದ ಜಾರ್ಜ್ ಟಿ.ವಿ, ಸಬಿತಾ ಮಿಸ್ಕಿತ್, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ಕೋಶಾಧಿಕಾರಿ ಮಹಮ್ಮದ್ ಬಪ್ಪಳಿಗೆ, ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್, ಬಿ ಹಬೀಬುಲ್ಲಾ, ಖಾಲಿದ್ ಪುಲಾಬೆ ಉಪಸ್ಥಿತರಿದ್ದರು.