UPSCಯಲ್ಲಿ 42ನೇ ರ‍್ಯಾಂಕ್‌ನಿಂದ ರಫೇಲ್ ಪೈಲಟ್‌ ವರೆಗೆ.. : ಮಂಗಳೂರಿನ ಪ್ರಜ್ವಲ್ ಶೆಟ್ಟಿಗೆ ದೇಶವೇ ಸಲಾಂ! ಆಕಾಶದಲ್ಲಿ ‘ನೀಲಕಂಠ’ ರಫೇಲ್ ಹಾರಿಸಿ ಶೌರ್ಯ ಮೆರೆದ ಮಂಗಳೂರಿನ ಯುವಕ

30-10-26 12:16 pm       HK News Staffer   ಕರಾವಳಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿ, ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಹಾರಿಸುವ ಮಟ್ಟಕ್ಕೆ ಬೆಳೆದ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದೇಶದ ಗಮನ ಸೆಳೆದಿದ್ದಾರೆ. .

ಮಂಗಳೂರು, ಅ.30 : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ‍್ಯಾಂಕ್ ಗಳಿಸಿ, ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಹಾರಿಸುವ ಮಟ್ಟಕ್ಕೆ ಬೆಳೆದ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ದೇಶದ ಗಮನ ಸೆಳೆದಿದ್ದಾರೆ. ಕೊಣಾಜೆಯ ಹರೇಕಳ ಉಳಿದೊಟ್ಟಿನ ರಮೇಶ್ ಶೆಟ್ಟಿ ಮತ್ತು ಕೊಡೆತ್ತೂರು ಮೂಡು ದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರನಾಗಿರುವ ಪ್ರಜ್ವಲ್ ಅವರ ಸಾಧನೆ ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಪಿಯುಸಿ ಶಿಕ್ಷಣದ ಬಳಿಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದ ಪ್ರಜ್ವಲ್, ಪುಣೆಯ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮೂರು ವರ್ಷಗಳ ಕಠಿಣ ತರಬೇತಿ ಪಡೆದರು. ಈ ಅವಧಿಯಲ್ಲಿ ‘ಸೂಪರ್ ಡಿಮೋನಾ’ ವಿಮಾನ ಹಾರಾಟದ ತರಬೇತಿ ಪಡೆದು ವಾಯುಯಾನ ಕ್ಷೇತ್ರದಲ್ಲಿ ತಮ್ಮ ಪಯಣ ಆರಂಭಿಸಿದರು.

ನಂತರ ಹೈದರಾಬಾದ್‌ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ಹಾರಾಟ ತರಬೇತಿ ಪಡೆದರು. ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ತರಬೇತಿ ಪೂರ್ಣಗೊಳಿಸಿದ ಅವರು, ವಾಯುಯಾನ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದೇ ಅವಧಿಯಲ್ಲಿ ಬಿ.ಟೆಕ್ ಪದವಿಯನ್ನೂ ಪಡೆದರು. ಡಿಸೆಂಬರ್ 2022ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಕಮಿಷನ್ ಆದ ಪ್ರಜ್ವಲ್, ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ‘ಹಾಕ್’ ಯುದ್ಧ ವಿಮಾನದಲ್ಲಿ ತರಬೇತಿ ಪಡೆದರು. ಈ ಹಂತದಲ್ಲಿಯೂ ಅಗ್ರಸ್ಥಾನ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮುಂದಿನ ಹಂತದ ಕಠಿಣ ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಜ್ವಲ್ ಅವರಿಗೆ ರಫೇಲ್ ಯುದ್ಧ ವಿಮಾನ ಹಾರಿಸುವ ಅವಕಾಶ ದೊರೆಯಿತು. ಅಂಬಾಲಾದ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆ್ಯರೋಸ್’ ಪಡೆಯ ಭಾಗವಾಗಿ ರಫೇಲ್ ಕನ್ವರ್ಷನ್ ತರಬೇತಿ ಪೂರ್ಣಗೊಳಿಸಿ, ಪ್ರಸ್ತುತ ರಫೇಲ್ ಫೈಟರ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಾರಾಣಸಿ ಏರ್ ಶೋನಲ್ಲಿ ರಫೇಲ್ ಹಾರಿಸಿದ ಪ್ರಜ್ವಲ್ 

ಭಾರತೀಯ ವಾಯುಪಡೆಯ 94ನೇ ಸಂಸ್ಥಾಪನಾ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ‘ವಿಂಗ್ಸ್ ಓವರ್ ಗಂಗೆ’ ವೈಮಾನಿಕ ಪ್ರದರ್ಶನದಲ್ಲಿಯೂ ಪ್ರಜ್ವಲ್ ಪ್ರಮುಖ ಆಕರ್ಷಣೆಯಾಗಿದ್ದರು. ಮೂರು ರಫೇಲ್ ವಿಮಾನಗಳನ್ನು ಒಳಗೊಂಡ ‘ನೀಲಕಂಠ’ ಫಾರ್ಮೇಷನ್‌ನಲ್ಲಿ ಮಧ್ಯಭಾಗದ ಪ್ರಮುಖ ಸ್ಥಾನದಿಂದ ವಿಮಾನ ಹಾರಿಸಿ ತಮ್ಮ ಹಾರಾಟದ ಕೌಶಲ್ಯ ಪ್ರದರ್ಶಿಸಿದರು.

ಪಿಯುಸಿ ಶಿಕ್ಷಣದ ಬಳಿಕ ಆರಂಭವಾದ ಪಯಣ, ಕಠಿಣ ತರಬೇತಿ, ಶಿಸ್ತು ಮತ್ತು ನಿರಂತರ ಪರಿಶ್ರಮದ ಮೂಲಕ ರಫೇಲ್ ಪೈಲಟ್ ಹಂತದವರೆಗೆ ತಲುಪಿದೆ. ಕರಾವಳಿಯ ಯುವಕನ ಈ ಸಾಧನೆ ಯುವಜನತೆಗೆ ಸ್ಫೂರ್ತಿಯಾಗಿದ್ದು, ಮಂಗಳೂರು ಹಾಗೂ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದೆ.