ಎಸ್ಐಟಿ ಕಚೇರಿಗೆ ದಾಖಲೆಗಳನ್ನು ಹೊತ್ತು ತಂದ ಗಿರೀಶ್ ಮಟ್ಟಣ್ಣನವರ್ ; ತನಿಖೆ ಬಗ್ಗೆ ಭರವಸೆ ಮೂಡಿದೆ, 90 ದಿನದಲ್ಲಿ ತನಿಖೆ ಆಗಲಿಕ್ಕಿಲ್ಲ..!

23-11-26 02:26 pm       HK News Staffer   ಕರಾವಳಿ

ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳು, ದೂರುದಾರರು ಮತ್ತು ತನಿಖೆ ನಡೆಸಿದ ಪೊಲೀಸರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ. ಇದರ ನಡುವೆ, ಎಸ್ಐಟಿ ಅಧಿಕಾರಿಗಳ ಬಳಿಗೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು ತನ್ನ ಬಳಿ ಇರುವ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ.

ಮಂಗಳೂರು, ನ.23: ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳು, ದೂರುದಾರರು ಮತ್ತು ತನಿಖೆ ನಡೆಸಿದ ಪೊಲೀಸರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ. ಇದರ ನಡುವೆ, ಎಸ್ಐಟಿ ಅಧಿಕಾರಿಗಳ ಬಳಿಗೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು ತನ್ನ ಬಳಿ ಇರುವ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. 

ಮಂಗಳೂರಿನ ಹಳೆ ಡಿಸಿ ಕಚೇರಿಯಲ್ಲಿರುವ ಎಸ್ಐಟಿ ಕಚೇರಿಗೆ ಮಟ್ಟಣ್ಣನವರ್ ಬಂದಿದ್ದು ಮೂಟೆಗಟ್ಟಲೆ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಆನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದ ಮಟ್ಟಣ್ಣನವರ್, 14 ವರ್ಷದಿಂದ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇವೆ. ನನ್ನ ಬಳಿ ಇದ್ದ ದಾಖಲೆಗಳನ್ನು ನೀಡಿದ್ದೇನೆ. ಅಲ್ಲದೆ, ಘಟನೆಯ ಸಂಪೂರ್ಣ ವಿವರವನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ತನಿಖಾಧಿಕಾರಿಗಳು ಸಣ್ಣ ಎಳೆಯನ್ನೂ ಬಿಡದೆ ತನಿಖೆ ಮಾಡುತ್ತಿದ್ದಾರೆ. 

ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ಸಂಪೂರ್ಣ ನಂಬಿಕೆಯಿದೆ. 90 ದಿನ ಕಾಲಾವಕಾಶದ ಒಳಗಡೆ ಪ್ರಕರಣದ ತನಿಖೆ ಮಾಡಲು ಸಾಧ್ಯವಿಲ್ಲ. ಹೆಚ್ಚುವರಿ ಸಮಯ ತೆಗೆದುಕೊಂಡರೂ ನಮ್ಮ ಆಕ್ಷೇಪ ಇಲ್ಲ.‌ ಇನ್ನೂ ಮೂರು ತಿಂಗಳು ಪಡೆಯಲಿ, ನಮ್ಮ ಅಭ್ಯಂತರ ಇಲ್ಲ‌ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗುತ್ತಿದೆ ಎಂಬ ಭರವಸೆ ಇದೆ.‌ ಹಾಲಿ ತನಿಖೆಯ ಬಗ್ಗೆ ನಮಗೂ ಸಮಾಧಾನ ಇದೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ.