ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ತಲಕಾವೇರಿಯಲ್ಲಿ ಬಾಳೆಕುದ್ರು ಶ್ರೀಗಳು ಪ್ರತ್ಯಕ್ಷ ; ಕೈಲಾಸಾಶ್ರಮದಲ್ಲಿ ಎರಡು ದಿನ ವಾಸ್ತವ್ಯ, ಮಾರಾಟ ಮಾಡಿಲ್ಲ, ವಿಗ್ರಹ ದುರಸ್ತಿ ನೀಡಿದ್ದೆವು!

08-11-26 10:43 pm       HK News Staffer   ಕರಾವಳಿ

ಪುರಾತನ ವಿಗ್ರಹಗಳ ಮಾರಾಟ ಆರೋಪದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಾಳೆಕುದ್ರು ಮಠದಿಂದ ನಿರ್ಗಮಿಸಿದ್ದ ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿ ಇದೀಗ ಕೊಡಗಿನ ತಲಕಾವೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರ ಕ್ಷೇತ್ರದ ಕೈಲಾಸಾಶ್ರಮದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಅಲ್ಲಿಂದ ನಿರ್ಗಮಿಸಿರುವ ವಿಚಾರ ಬೆಳಕಿಗೆ ಬಂದಿದೆ. ಸ್ವಾಮೀಜಿಯವರ ಈ ವಾಸ್ತವ್ಯ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಮಡಿಕೇರಿ , ನ.8: ಪುರಾತನ ವಿಗ್ರಹಗಳ ಮಾರಾಟ ಆರೋಪದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಾಳೆಕುದ್ರು ಮಠದಿಂದ ನಿರ್ಗಮಿಸಿದ್ದ ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿ ಇದೀಗ ಕೊಡಗಿನ ತಲಕಾವೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರ ಕ್ಷೇತ್ರದ ಕೈಲಾಸಾಶ್ರಮದಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಅಲ್ಲಿಂದ ನಿರ್ಗಮಿಸಿರುವ ವಿಚಾರ ಬೆಳಕಿಗೆ ಬಂದಿದೆ. ಸ್ವಾಮೀಜಿಯವರ ಈ ವಾಸ್ತವ್ಯ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿತರಕ್ಷಣಾ ವೇದಿಕೆಯ ದೂರಿನ ಮೇರೆಗೆ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆಂಟ್ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್ ಹಾಗೂ ವಿಗ್ರಹಗಳನ್ನು ಪಡೆದಿದ್ದಾರೆ ಎನ್ನಲಾದ ನಾಗೇಂದ್ರ ಪ್ರಸಾದ್ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮಠದಿಂದ ನಿರ್ಗಮಿಸಿದ್ದರು. ಬಳಿಕ ಅವರು ಎಲ್ಲಿದ್ದಾರೆ, ಎಲ್ಲಿಗೆ ತೆರಳಿದ್ದಾರೆ ಎಂಬ ಪ್ರಶ್ನೆಗಳು ಶಿಷ್ಯವರ್ಗದಲ್ಲಿ ಮೂಡಿದ್ದವು. ಈ ನಡುವೆ ಗುರುವಾರ ತಲಕಾವೇರಿಗೆ ಆಗಮಿಸಿದ್ದ ಸ್ವಾಮೀಜಿ ಶುಕ್ರವಾರ ಸಂಜೆವರೆಗೂ ಅಲ್ಲಿನ ಕೈಲಾಸಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿಂದ ನಿರ್ಗಮಿಸಿದ್ದಾರೆ.

'ನಮಗೂ ರಕ್ಷಣೆ ಬೇಕಾಗಿದೆ' ಎಂದ ಸ್ವಾಮೀಜಿ!

ಕೈಲಾಸಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅನಗತ್ಯ ಗೊಂದಲಗಳಿಂದ ತಮಗೂ ರಕ್ಷಣೆ ಬೇಕಾಗಿದೆ. ಅದಕ್ಕಾಗಿ ತಲಕಾವೇರಿಗೆ ಬರಬೇಕಾಯಿತು ಎಂದು ತಿಳಿಸಿದ್ದಾರೆ. ತಮ್ಮ ವಿರುದ್ಧದ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲು ತಂಡ ಸಿದ್ಧವಾಗಿದೆ ಎಂದೂ ಹೇಳಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧ ಕೇಳಿಬಂದಿರುವ ವಿಗ್ರಹ ಮಾರಾಟದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದು ಇತ್ತೀಚೆಗೆ ಆರಂಭವಾದ ವಿವಾದವಲ್ಲ, 2013ರಿಂದಲೇ ಮಠದೊಳಗೆ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಗುರುಗಳ ಕಾಲದಿಂದಲೂ ಕೆಲವರು ಮಠದ ಪೀಠದಿಂದ ಗುರುಗಳನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಮಠದ ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂಬುದು ಸ್ವಾಮೀಜಿಯವರ ಆರೋಪವಾಗಿದೆ.

'ವಿಗ್ರಹ ಮಾರಾಟ ಮಾಡಿಲ್ಲ, ದುರಸ್ತಿಗಾಗಿ ನೀಡಿದ್ದೆವು'

ಮಠದ ಕೆಲವು ವಿಗ್ರಹಗಳು ಕಾಲಕ್ರಮೇಣ ಹಾನಿಗೊಳಗಾಗಿದ್ದವು. ಅವುಗಳನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ದುರಸ್ತಿ ಮಾಡಿಸುವ ಉದ್ದೇಶದಿಂದ ಲೋಹದ ವ್ಯಾಪಾರಿಯೊಬ್ಬರಿಗೆ ನೀಡಲಾಗಿತ್ತು ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.‌ ಯಾವುದೇ ವಿಗ್ರಹಗಳನ್ನು ಅಕ್ರಮವಾಗಿ ಮಾರಾಟ ಮಾಡಿಲ್ಲ. ಸಂಪೂರ್ಣ ಹಾಳಾಗಿದ್ದ ಕೆಲವು ಬಿಂಬಗಳನ್ನು ಧಾರ್ಮಿಕ ಸಂಪ್ರದಾಯದಂತೆ ವಿಸರ್ಜಿಸಲಾಗಿದೆ. ದುರಸ್ತಿಗೊಳಿಸಿದ ವಿಗ್ರಹಗಳನ್ನು ಮತ್ತೆ ಪೂಜಾ ಕಾರ್ಯಗಳಿಗೆ ಬಳಸುವ ಉದ್ದೇಶದಿಂದಲೇ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.