ಬಹುನಿರೀಕ್ಷಿತ ಬೆಂಗಳೂರು - ಮಂಗಳೂರು- ಗೋವಾ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ಗೆ 13ರಂದು ಪ್ರಧಾನಿ ಮೋದಿ ಚಾಲನೆ ; ನ.15ರಿಂದ ಯಶವಂತಪುರ - ಮಡಗಾಂವ್ ನಡುವೆ ರೈಲು ಅಧಿಕೃತ ಸಂಚಾರ

11-11-26 08:59 pm       HK News Staffer   ಕರಾವಳಿ

ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್‌ನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನ.13ರಂದು ಚಾಲನೆ ನೀಡಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಅವರು ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಈ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

ಮಂಗಳೂರು, ನ.11 : ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಮೂಲಕ ಗೋವಾದ ಮಡಗಾಂವ್‌ನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನ.13ರಂದು ಚಾಲನೆ ನೀಡಲಿದ್ದಾರೆ. ಅಂದು ಮಧ್ಯಾಹ್ನ 12ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಅವರು ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಈ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. 

ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲು ಬೆಂಗಳೂರನ್ನು ಕರ್ನಾಟಕದ ಕರಾವಳಿ ತೀರದೊಂದಿಗೆ ನೇರವಾಗಿ ಬೆಸೆಯಲಿದೆ. ಕಳೆದೊಂದು ವರ್ಷದಿಂದ ಮಡಗಾಂವ್ ಹಾಗೂ ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲಿನ ಸೇವೆಯನ್ನು ಇದೀಗ ಬೆಂಗಳೂರಿನ ವರೆಗೆ ವಿಸ್ತರಿಸಲಾಗಿದ್ದು, ಇನ್ನು ಮುಂದೆ ಮಡಗಾಂವ್-ಬೆಂಗಳೂರು ನಡುವೆ ಪೂರ್ಣ ಪ್ರಮಾಣದಲ್ಲಿ ಸಂಚರಿಸಲಿದೆ. 

ಅದೇ ಸಮಯದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿಯೂ ಸರಳ ಸಮಾರಂಭ ಆಯೋಜಿಸಲಾಗಿದೆ. ಕರಾವಳಿಯಿಂದ ಬೆಂಗಳೂರಿನತ್ತ ಸಾಗುವ ರೈಲಿನ ಸಂಚಾರವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಮಂಗಳೂರು, ಉಡುಪಿ ಹಾಗೂ ಕಾರವಾರ ಕ್ಷೇತ್ರದ ಸಂಸದರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ.

ವಾರದಲ್ಲಿ ಆರು ದಿನ ಸಂಚಾರ 

ಯಶವಂತಪುರ- ಮಡಗಾಂವ್- ಯಶವಂತಪುರ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನ.15ರಿಂದ ಆರಂಭವಾಗಲಿದೆ. ರೈಲ್ವೆ ಮಂಡಳಿಯ ನಿರ್ಧಾರದಂತೆ 26655/26656 ಸಂಖ್ಯೆಯ ಈ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಯಶವಂತಪುರದಿಂದ ಮಡಗಾಂವ್‌ಗೆ ತೆರಳುವ ರೈಲು ಬುಧವಾರ ಸಂಚರಿಸುವುದಿಲ್ಲ. ಮಡಗಾಂವ್‌ನಿಂದ ಯಶವಂತಪುರಕ್ಕೆ ತೆರಳುವ ರೈಲು ಗುರುವಾರ ಸಂಚರಿಸುವುದಿಲ್ಲ. ಉಳಿದಂತೆ ಆರು ದಿನ ಸಂಚಾರ ಇರಲಿದೆ. 

ರೈಲು ಸಂಖ್ಯೆ 26655 ಯಶವಂತಪುರದಿಂದ ಬೆಳಗ್ಗೆ 7.35 ಕ್ಕೆ ಹೊರಟು ಅದೇ ದಿನ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ 26656 ಮಡಗಾಂವ್ ನಿಂದ ಬೆಳಗ್ಗೆ 8.20ಕ್ಕೆ ಹೊರಟು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಹೊಸ ರೈಲು ಸೇವೆ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಚರಿಸುತ್ತಿರುವ 20645/20646 ಸಂಖ್ಯೆಯ ಮಡಗಾಂವ್- ಮಂಗಳೂರು ಸೆಂಟ್ರಲ್- ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನ.15ರಿಂದ ಸ್ಥಗಿತಗೊಳಿಸಲಾಗುವುದು. ಮಡಗಾಂವ್ ಮತ್ತು ಮಂಗಳೂರು ಸೆಂಟ್ರಲ್ ಎರಡೂ ನಿಲ್ದಾಣಗಳಿಂದ ಈ ರೈಲು ಸೇವೆ ರದ್ದಾಗಲಿದೆ.

ಹೊಸ ವಂದೇ ಭಾರತ್ ರೈಲು 16 ಬೋಗಿಗಳನ್ನು ಒಳಗೊಂಡಿರಲಿದೆ. ರೈಲಿನ ನಿಲುಗಡೆ ಮತ್ತು ವೇಳಾಪಟ್ಟಿಯ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಸಂಪರ್ಕಿಸಬಹುದು.