ಆಶಾ ಕಾರ್ಯಕರ್ತರ ಒಕ್ಕೊರಳ ದನಿಗೆ ಕಡೆಗೂ ಮಣಿದ ರಾಜ್ಯ ಸರ್ಕಾರ ; ಮಾಸಿಕ ಗೌರವಧನ ಎರಡು ಸಾವಿರ ಹೆಚ್ಚಿಸಲು ಒಪ್ಪಿಗೆ, 12 ದಿನಗಳ ಪ್ರತಿಭಟನೆ ಅಂತ್ಯ

28-11-26 09:30 pm       HK News Staffer   ಕರ್ನಾಟಕ

12 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಕಡೆಗೂ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದ್ದು ಮಾಸಿಕ ಗೌರವಧನ ತಲಾ ಎರಡು ಸಾವಿರ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಇದರೊಂದಿಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಸರಕಾರದ ಸಂಧಾನದ ಬಳಿಕ ಸುಖಾಂತ್ಯ ಕಂಡಿದೆ. ರಾಜ್ಯ ಸರ್ಕಾರ ಗೌರವ ಧನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಧರಣಿಯನ್ನು ಅಂತ್ಯಗೊಳಿಸಲಾಗಿದೆ.

ಬೆಂಗಳೂರು, ನ.28: 12 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಕಡೆಗೂ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದ್ದು ಮಾಸಿಕ ಗೌರವಧನ ತಲಾ ಎರಡು ಸಾವಿರ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಇದರೊಂದಿಗೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಸರಕಾರದ ಸಂಧಾನದ ಬಳಿಕ ಸುಖಾಂತ್ಯ ಕಂಡಿದೆ. ರಾಜ್ಯ ಸರ್ಕಾರ ಗೌರವ ಧನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಧರಣಿಯನ್ನು ಅಂತ್ಯಗೊಳಿಸಲಾಗಿದೆ. 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಕೊನೆಗೂ ಗುಡ್‌ನ್ಯೂಸ್ ಕೊಟ್ಟಿದೆ. 49 ಸಾವಿರ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು 2,000 ರೂ. ಹೆಚ್ಚಳ ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಿದ್ದು, ಪರಿಷ್ಕೃತ ದರವು ಜನವರಿ 1, 2027ರಿಂದ ಜಾರಿಗೆ ಬರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 
ಈ ನಿರ್ಧಾರದಿಂದ ರಾಜ್ಯದ ಸುಮಾರು 49 ಸಾವಿರ ಆಶಾ ಕಾರ್ಯಕರ್ತೆಯರ ಕನಿಷ್ಠ ಮಾಸಿಕ ಗೌರವಧನ 10 ಸಾವಿರ ರೂ.ಗೆ ಏರಿಕೆಯಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 100 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. 

ಕಳೆದ ಮೂರು ವರ್ಷಗಳಿಂದ ಗೌರವಧನದಲ್ಲಿ ಹೆಚ್ಚಳ ಮಾಡಲಾಗಿಲ್ಲ ಎಂಬುದು ಆಶಾ ಕಾರ್ಯಕರ್ತೆಯರ ಅಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಗೌರವಧನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ರೂ. 5 ಸಾವಿರ, ಕೇಂದ್ರ ಸರ್ಕಾರ ರೂ. 2 ಸಾವಿರ ಗೌರವಧನ ನೀಡುತ್ತಿದ್ದು, ಕಾರ್ಯ ನಿರ್ವಹಣೆ ಆಧಾರದಲ್ಲಿ ಸರಾಸರಿ ರೂ.2 ಸಾವಿರದಷ್ಟು ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನ ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಹಂಚಿಕೆ ಮಾಡಬೇಕಿದ್ದರೂ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ ಹೆಚ್ಚಳ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು” ಎಂದು ಹೇಳಿದರು.