ಬಾಳೆಕುದ್ರು ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರೋಪ ; ಪೊಳಲಿ ಬಳಿಯಲ್ಲಿ ದೇವಸ್ಥಾನ ಕಟ್ಟಿಸುತ್ತೇನೆಂದು ಹೇಳಿ ಜಾಗ ಅತಿಕ್ರಮಿಸಿ ಮೋಸ, ಪ್ರಾಕೃತಿಕ ರೂಪದಲ್ಲಿದ್ದ ಶಿವನ ಸಾನ್ನಿಧ್ಯ ಕೆಡವಿ ನಿಧಿ ಶೋಧ !

12-11-26 03:51 pm       HK News Staffer   ಕರಾವಳಿ

ಹಂಗಾರಕಟ್ಟೆ ಬಾಳೆಕುದ್ರು ಮಠದಲ್ಲಿ ಪ್ರಾಚೀನ ವಿಗ್ರಹಗಳನ್ನು ಮಾರಾಟ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಮಂಗಳೂರು ಹೊರವಲಯದ ಪೊಳಲಿ ದೇವಸ್ಥಾನ ಸಮೀಪದ ದೇವರಗುಡ್ಡೆ ಎಂಬಲ್ಲಿ ಅನಾದಿ ಕಾಲದಿಂದ ನಂಬಿಕೊಂಡು ಬಂದಿದ್ದ ಶಿವಲಿಂಗ ಸಹಿತವಿದ್ದ ಪ್ರಕೃತಿದತ್ತ ದೇಗುಲವನ್ನು ಕೆಡವಿ ಹೊಸ ದೇವಸ್ಥಾನ ಕಟ್ಟಿಸುತ್ತೇನೆಂದು ನಂಬಿಸಿ ಅಲ್ಲಿನ ಜಾಗವನ್ನೇ ತನ್ನ ವೈಯಕ್ತಿಕ ಹೆಸರಿಗೆ ಮಾಡಿಸಿಕೊಂಡು ವಂಚನೆ ಎಸಗಿರುವ ಆರೋಪ ಹೊರಿಸಲಾಗಿದೆ.

ಮಂಗಳೂರು, ನ.12: ಹಂಗಾರಕಟ್ಟೆ ಬಾಳೆಕುದ್ರು ಮಠದಲ್ಲಿ ಪ್ರಾಚೀನ ವಿಗ್ರಹಗಳನ್ನು ಮಾರಾಟ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಮಂಗಳೂರು ಹೊರವಲಯದ ಪೊಳಲಿ ದೇವಸ್ಥಾನ ಸಮೀಪದ ದೇವರಗುಡ್ಡೆ ಎಂಬಲ್ಲಿ ಅನಾದಿ ಕಾಲದಿಂದ ನಂಬಿಕೊಂಡು ಬಂದಿದ್ದ ಶಿವಲಿಂಗ ಸಹಿತವಿದ್ದ ಪ್ರಕೃತಿದತ್ತ ದೇಗುಲವನ್ನು ಕೆಡವಿ ಹೊಸ ದೇವಸ್ಥಾನ ಕಟ್ಟಿಸುತ್ತೇನೆಂದು ನಂಬಿಸಿ ಅಲ್ಲಿನ ಜಾಗವನ್ನೇ ತನ್ನ ವೈಯಕ್ತಿಕ ಹೆಸರಿಗೆ ಮಾಡಿಸಿಕೊಂಡು ವಂಚನೆ ಎಸಗಿರುವ ಆರೋಪ ಹೊರಿಸಲಾಗಿದೆ.

ಪೊಳಲಿ ದೇವಸ್ಥಾನದಿಂದ 500 ಮೀಟರ್ ದೂರದಲ್ಲಿರುವ ಅಗಸ್ತ್ಯೇಶ್ವರ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಈ ಜಾಗದಲ್ಲಿ ಎರಡು ಮರಗಳ ಎಡೆಯಲ್ಲಿ ಬೃಹತ್ ಶಿವಲಿಂಗದ ಸಾನ್ನಿಧ್ಯ ಇತ್ತು. ಸುತ್ತ ಬೆಳೆದಿದ್ದ ಕಾಡು ಪ್ರಾಕೃತಿಕ ದೇಗುಲದ ರೂಪ ಪಡೆದಿದ್ದರೆ, ತಂಪಿನ ಪ್ರದೇಶವಾಗಿದ್ದರಿಂದ ಅಲ್ಲಿಯೇ ನಾಗನ ವಾಸವೂ ಇತ್ತು. ಪೊಳಲಿ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ದೇವರಗುಡ್ಡೆಯ ಶಿವನ ಆಲಯವನ್ನೂ ಜೀರ್ಣೋದ್ಧಾರ ಮಾಡಬೇಕೆಂದು ಪ್ರಶ್ನಾಚಿಂತನೆಯಲ್ಲಿ ಬಂದಿದ್ದರೂ, ದೇವಸ್ಥಾನದ ಪ್ರಮುಖರು ಹೆಚ್ಚಿನ ಆಸ್ಥೆ ವಹಿಸಿರಲಿಲ್ಲ.

ಆದರೆ, ಮರ ಬಳ್ಳಿಗಳ ಎಡೆಯಲ್ಲಿದ್ದ ಶಿವಲಿಂಗಕ್ಕೆ ಮೊದಲಿನಿಂದಲೂ ಸ್ಥಳೀಯರು ಹೂಗಳನ್ನಿಟ್ಟು ನೀರಿನಲ್ಲಿ ಅಭಿಷೇಕ ಮಾಡುತ್ತಿದ್ದರು. ಪೊಳಲಿಗೆ ಬರುತ್ತಿದ್ದ ಇತರ ಭಕ್ತರು ಕೂಡ ಇಲ್ಲಿಗೆ ಬಂದು ನಮಿಸಿ ಹೋಗುತ್ತಿದ್ದರು. ಇದನ್ನು ತಿಳಿದ ಗುರುಪುರ ಮೂಲದ, ಬಾಳೆಕುದ್ರು ಮಠದಲ್ಲಿ ಸ್ವಾಮೀಜಿಯಾಗಿದ್ದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಈ ಜಾಗವನ್ನು ಮಠಕ್ಕೆ ಬರೆದುಕೊಟ್ಟರೆ ನಾವು ಜೀರ್ಣೋದ್ಧಾರ ಮಾಡುತ್ತೇವೆ ಎಂದು ಹೇಳಿ ಮನವೊಲಿಸಿದ್ದರು. ಅದರಂತೆ, ಸ್ಥಳೀಯರು ಒಂದಷ್ಟು ಜಾಗವನ್ನು ದಾನವಾಗಿ ನೀಡಿದ್ದರು. ಆದರೆ ಸ್ವಾಮೀಜಿ ಈ ಜಾಗವನ್ನು ಮಠದ ಹೆಸರಿಗೆ ಮಾಡುವ ಬದಲು ತನ್ನದೇ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ರಿ ಜಾಗದಲ್ಲಿ ದೇವಸ್ಥಾನ ಕಟ್ಟುವ ನೆಪದಲ್ಲಿ ನಿಧಿ ಶೋಧ ನಡೆಸಿದ್ದಾಗಿಯೂ ಸ್ಥಳೀಯರು ಹೇಳುತ್ತಿದ್ದಾರೆ.

ಸುತ್ತ ಬೆಳೆದಿದ್ದ ಮರಗಳನ್ನು ಬುಡ ಸಮೇತ ಕಿತ್ತು ಹುಂಚ ಬೆಳೆದಿದ್ದ ಜಾಗದಲ್ಲಿ ನಿಧಿ ಇರಬಹುದೆಂಬ ಶಂಕೆಯಲ್ಲಿ ರಾತ್ರೋರಾತ್ರಿ ಜೆಸಿಬಿ ತಂದು ಶೋಧನೆ ನಡೆಸಿದ್ದಾರೆ. ಅಲ್ಲದೆ, ಅಲ್ಲಿದ್ದ ಮರಗಳನ್ನು ಕಡಿದಿದ್ದು ಶಿವಲಿಂಗವನ್ನು ಕದಲಿಸಲು ಆಗದೆ ಅದೇ ಜಾಗದಲ್ಲಿ ಗುಡಿ ಕಟ್ಟಿದ್ದಾರೆ, ಈಗ ಪೂರ್ತಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಆರು ತಿಂಗಳಾಗಿದೆ. ಒಟ್ಟು ಪ್ರಕ್ರಿಯೆಯಿಂದ ಸ್ಥಳೀಯರನ್ನೂ ದೂರ ಇರಿಸಿದ್ದು, ಅಲ್ಲೀಗ ಶಿವನಿಗೆ ನಿತ್ಯ ಪೂಜೆಯೂ ಇಲ್ಲದಾಗಿದೆ. ಅದೇ ಪರಿಸರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಶಿಬಿರ ಹೂಡುತ್ತಿದ್ದ ಜಾಗವನ್ನೂ ಆಕ್ರಮಿಸಿಕೊಂಡಿದ್ದು ಬಾಳೆಕುದ್ರು ಮಠಕ್ಕೆ ಸೇರಿದ ಜಾಗವೆಂದು ಬೋರ್ಡ್ ಹಾಕಲಾಗಿದೆ. ಸ್ಥಳದಲ್ಲಿ ಲಕ್ಷ್ಮೀ ನರಸಿಂಹ ಮೂರ್ತಿಯ ಪ್ರತಿಷ್ಠೆಗೆಂದು ಕಲ್ಲಿನ ಮೂರ್ತಿಯನ್ನು ತಂದಿರಿಸಲಾಗಿದೆ.

ಸ್ಥಳೀಯರು ಹೇಳುವ ಪ್ರಕಾರ, ಗುರುಪುರದ್ದೇ ಬ್ರಾಹ್ಮಣ ಸಮುದಾಯದ ಸ್ವಾಮೀಜಿ ಆಗಿರುವುದರಿಂದ ಭಕ್ತಿಯಿಂದ ನಡೆದುಕೊಂಡಿದ್ದೇವೆ, ನಾವೆಲ್ಲ ತಿಳಿದ ವ್ಯಕ್ತಿಯೆಂದು ವಿಶ್ವಾಸದಿಂದ ಜಾಗವನ್ನು ಬಿಟ್ಟುಕೊಟ್ಟಿದ್ದೆವು. ಆದರೆ ಈಗ ನೋಡಿದರೆ ಈ ಜಾಗವನ್ನು ಬಾಳೆಕುದ್ರು ಮಠಕ್ಕೆ ಸೇರಿಸುವ ಬದಲು ತನ್ನ ಹೆಸರಿನಲ್ಲೇ ಮಾಡಿಕೊಂಡಿದ್ದಾರೆ. ನಮಗೆ ವಂಚನೆ ಎಸಗಿದ್ದಕ್ಕೆ ಈಗ ತಕ್ಕ ಶಾಸ್ತಿಯಾಗಿದ್ದು ತಲೆಮರೆಸಿಕೊಂಡು ಹೋಗುವ ಸ್ಥಿತಿಯಾಗಿದೆ. ಇಲ್ಲಿ ದೇವಸ್ಥಾನವನ್ನೂ ಮಾಡಿಸಿಲ್ಲ. ಪ್ರಾಕೃತಿಕ ನಾಗ ಬನವಾಗಿದ್ದ ಪ್ರದೇಶವನ್ನು ಕೆಡವಿ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಜಾಗವನ್ನು ತನ್ನ ಹೆಸರಲ್ಲಿ ಮಾಡಿಕೊಂಡಿದ್ದರಿಂದ ನಾವು ಈಗ ಪ್ರಶ್ನೆ ಮಾಡುವಂತೆಯೂ ಇಲ್ಲ ಎಂದು ಸ್ಥಳೀಯರಾದ ನೇಮು ಪೂಜಾರಿ, ದೀಕ್ಷಿತ್ ಪೂಜಾರಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.  

ಬಾಳೆಕುದ್ರು ಮಠದಲ್ಲಿ ಹಳೆಯದಾಗಿದ್ದ ಮೂರ್ತಿಗಳನ್ನು ತೆಗೆದು ಹೊಸ ಮೂರ್ತಿಗಳನ್ನು ಸ್ಥಾಪನೆ ಮಾಡುವುದಾಗಿ ಹೇಳಿ ಹಳೆಯ ಮೂರ್ತಿಗಳನ್ನು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಮಾರಾಟ ಮಾಡಿರುವ ಬಗ್ಗೆ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸ್ವಾಮೀಜಿ ಮತ್ತು ಅಲ್ಲಿನ ಆಡಳಿತಾಧಿಕಾರಿ ನಾಪತ್ತೆಯಾಗಿದ್ದಾರೆ. ಮಠದಲ್ಲಿ ಶೃಂಗೇರಿ ಸ್ವಾಮೀಜಿ ಪರವಾಗಿರುವ ಭಕ್ತರು ಮತ್ತು ವಾಸುದೇವ ಸ್ವಾಮೀಜಿ ಪರ ಇರುವ ಶಿವಳ್ಳಿ ವರ್ಗದ ಅನುಯಾಯಿಗಳ ನಡುವೆ ಕೆಲವು ತಿಂಗಳಿನಿಂದ ಜಟಾಪಟಿ ನಡೆಯುತ್ತಿದೆ.

Another fraud allegation has surfaced against Vasudeva Sadashivashrama Swamiji, who is reportedly absconding amid allegations of selling ancient idols at the Hangarakatte Balekudru Math. The latest allegation concerns a naturally formed shrine, believed to have existed since time immemorial, at Devaragudde near Polali Temple on the outskirts of Mangaluru. The shrine, which housed a Shiva Lingam, was reportedly demolished after the Swamiji allegedly assured devotees and local residents that a new temple would be constructed at the site.