ಸೌಜನ್ಯಾ ಪ್ರಕರಣ ; ಸಂತೋಷ್ ರಾವ್ ತಪಾಸಣೆ ನಡೆಸಿದ್ದ ಡಾ.ಮಹಾಬಲ ಶೆಟ್ಟಿಗೆ 5 ಗಂಟೆ ಡ್ರಿಲ್, ಯಾಕೆ ಕರೆಸಿದ್ದಾರೆಂದು ಅವರನ್ನೇ ಕೇಳಿ, ಅದೆಲ್ಲ ಕೋರ್ಟಲ್ಲಿ ಆಗಿದ್ಯಲ್ವಾ ಎಂದ ವೈದ್ಯ..!

12-11-26 06:34 pm       HK News Staffer   ಕರಾವಳಿ

ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಸೌಜನ್ಯಾ ಪ್ರಕರಣದಲ್ಲಿ ಎಸ್ಐಟಿ ತನಿಖೆ ಚುರುಕುಗೊಳಿಸಿದ್ದು, ಈ ಹಿಂದೆ ಆರೋಪಿಯೆಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನನ್ನು ವೈದ್ಯಕೀಯ ತಪಾಸಣೆ ನಡೆಸಿದ್ದ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಅವರನ್ನು ಕಚೇರಿಗೆ ಕರೆಸಿಕೊಂಡು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಮಂಗಳೂರು, ನ.12: ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಸೌಜನ್ಯಾ ಪ್ರಕರಣದಲ್ಲಿ ಎಸ್ಐಟಿ ತನಿಖೆ ಚುರುಕುಗೊಳಿಸಿದ್ದು, ಈ ಹಿಂದೆ ಆರೋಪಿಯೆಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್ ನನ್ನು ವೈದ್ಯಕೀಯ ತಪಾಸಣೆ ನಡೆಸಿದ್ದ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಅವರನ್ನು ಕಚೇರಿಗೆ ಕರೆಸಿಕೊಂಡು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಬೆಳಗ್ಗೆ 11 ಗಂಟೆ ವೇಳೆಗೆ ಮಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿದ ಮಹಾಬಲ ಶೆಟ್ಟಿ ಸಂಜೆಯ ವರೆಗೂ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಧರ್ಮಸ್ಥಳದಲ್ಲಿ ಅಲೆದಾಡುತ್ತಿದ್ದ ಸಂತೋಷ್ ರಾವ್ ನನ್ನು ಅಲ್ಲಿನ ಕೆಲಸದವರೇ ಹಿಡಿದುಕೊಟ್ಟು ಆನಂತರ ಪೊಲೀಸರು ಆತನನ್ನೇ ಆರೋಪಿಯನ್ನಾಗಿ ಮಾಡಿದ್ದರು. ಈ ವೇಳೆ, ಸಂತೋಷ್ ರಾವ್ ಮಾನಸಿಕ ಅಸ್ವಸ್ಥ ಮತ್ತು ಆತನಿಗೆ ನಿಗೂಢ ರೋಗದ ಬಳಲಿಕೆ ಇತ್ತು ಎನ್ನುವ ವಿಚಾರದಲ್ಲಿ ವೈದ್ಯರು ವರದಿ ನೀಡಿದ್ದರು ಎನ್ನುವುದು ಸಿಬಿಐ ಕೋರ್ಟಿನಲ್ಲಿ ವಿಚಾರಣೆ ಸಂದರ್ಭ ಉಲ್ಲೇಖವಾಗಿತ್ತು.

ಆನಂತರ, ಸಂತೋಷ್ ರಾವ್ ನಿರಪರಾಧಿಯೆಂದು ಕೋರ್ಟಿನಲ್ಲಿ ತೀರ್ಪು ಬಂದಿರುವುದರಿಂದ ಈಗ ನೈಜ ಆರೋಪಿ ಯಾರೆನ್ನುವುದನ್ನು ಪತ್ತೆ ಮಾಡಲು ಮರು ತನಿಖೆ ನಡೆಯುತ್ತಿದೆ. ಇದೇ ವೇಳೆ, ಸಂತೋಷ್ ರಾವ್ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದ ವೈದ್ಯ ಮಹಾಬಲ ಶೆಟ್ಟಿಯನ್ನು ಅಧಿಕಾರಿಗಳು ಕರೆಸಿಕೊಂಡು ಡ್ರಿಲ್ ಮಾಡಿದ್ದಾರೆ. ಆಮೂಲಕ ತಮ್ಮ ಅನುಮಾನದ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದಿರುವ ಸಾಧ್ಯತೆ ಇದೆ. ಆದರೆ, ತನಿಖೆ ಮುಗಿಸಿ ಹೊರಬಂದ ಮಹಾಬಲ ಶೆಟ್ಟಿ ಅವರನ್ನು ಮಾಧ್ಯಮಗಳು ಸುತ್ತುವರಿದು ಪ್ರಶ್ನೆ ಮಾಡಿದಾಗ, ನನ್ನನ್ನು ಯಾಕೆ ಕರೆಸಿದ್ದಾರೆಂದು ಅವರಲ್ಲಿ ಕೇಳಿ. ನನ್ನನ್ನು ಯಾಕೆ ಕೇಳುತ್ತೀರಿ ಎಂದು ರೇಗಿದ್ದಾರೆ. ಸಂತೋಷ್ ರಾವ್ ನನ್ನು ಮತ್ತೆ ವಿಚಾರಣೆ ನಡೆಸಲ್ಲ ಎಂದು ಕೋರ್ಟ್ ಹೇಳಿದೆಯಲ್ವಾ ಎಂದು ಕೇಳಿದ್ದಕ್ಕೆ, ಅದೆಲ್ಲ ಕೋರ್ಟಿನಲ್ಲಿ ಆಗಿ ಹೋಗಿದೆ, ಮತ್ತೆ ಸಂತೋಷ್ ರಾವ್ ಕತೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ, ಮೃತ ಸೌಜನ್ಯಾಳನ್ನು ಪೋಸ್ಟ್ ಮಾರ್ಟಂ ಪರೀಕ್ಷೆ ನಡೆಸಿದ್ದ ವೇಳೆ ವಾರ್ಡ್ ಬಾಯ್ ಆಗಿ ಸಹಾಯಕನಾಗಿದ್ದ ಅನಿಲ್ ಎಂಬ ಯುವಕನನ್ನೂ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಪೋಸ್ಟ್ ಮಾರ್ಟಂ ಪರೀಕ್ಷೆಯಲ್ಲಿ ಸೌಜನ್ಯಾ ಹೊಟ್ಟೆಯಲ್ಲಿ ಕೆಲವೇ ಗಂಟೆಗಳ ಹಿಂದೆ ತಿಂದಿದ್ದ ಅನ್ನ ಇತ್ತು ಎನ್ನುವ ವಿಚಾರ ತಿಳಿದುಬಂದಿದ್ದರಿಂದ ಆಕೆಗೆ ಯಾರೋ ಅನ್ನ ತಿನ್ನಿಸಿದ್ದರು ಎನ್ನುವ ವಿಚಾರ ಸಂಶಯಕ್ಕೀಡಾಗಿತ್ತು. ಅಲ್ಲದೆ, ಆಕೆಯ ಗುಪ್ತಾಂಗ ಮತ್ತು ದೇಹದಲ್ಲಿ ಪರಚಿದ ಗಾಯದ ಗುರುತುಗಳಿದ್ದವು ಎನ್ನುವ ಬಗ್ಗೆಯೂ ಉಲ್ಲೇಖವಾಗಿತ್ತು. ಇವೆಲ್ಲದರ ಬಗ್ಗೆ ಸಹಾಯಕನಿಂದಲೂ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದಿದ್ದಾರೆ.

ಸಂತೋಷ್ ರಾವ್ ದೇಹದಲ್ಲಿ ಗಾಯಗಳಿದ್ದವು, ಅಲ್ಲದೆ, ಆತನಿಗೆ ಜನನಾಂಗ ಉದ್ರೇಕಗೊಳ್ಳದಿರುವ ರೋಗ ಇತ್ತು ಎನ್ನುವ ಬಗ್ಗೆಯೂ ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ದಾಖಲಾಗಿತ್ತು. ಇದೇ ಕಾರಣಕ್ಕೆ ಸಂತೋಷ್ ರಾವ್ ಆರೋಪಿ ಆಗಿರಲಿಕ್ಕಿಲ್ಲ, ಹೀಗಿದ್ದ ಮೇಲೆ ಹೆಣ್ಣನ್ನು ಬಲಾತ್ಕಾರ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೋರ್ಟಿನಲ್ಲಿ ಬಂದಿತ್ತು. ಈ ಪ್ರಶ್ನೆಗೆ ವಿಚಾರಣಾಧಿಕಾರಿಗಳಿಂದ ಉತ್ತರ ನೀಡಲು ಸಾಧ್ಯವಾಗಿರಲಿಲ್ಲ. ಇವೆಲ್ಲ ವಿಚಾರದ ಬಗ್ಗೆ ವೈದ್ಯರು ಮತ್ತು ತಜ್ಞರಿಂದ ವರದಿ ಬಗ್ಗೆ ಮರು ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯುತ್ತಿದ್ದಾರೆ.

ಇದೇ ವೇಳೆ, ಸೌಜನ್ಯಾ ತಾಯಿ ಕುಸುಮಾವತಿ ಅವರನ್ನೂ ಮಂಗಳೂರಿನ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದ್ದು, ಅವರಲ್ಲಿರುವ ಸಂಶಯದ ಪ್ರಶ್ನೆಗಳನ್ನು ಪೊಲೀಸರು ಆಲಿಸಲು ಮುಂದಾಗಿದ್ದಾರೆ.