ಕನ್ಸಲ್ಟನ್ಸಿಗಳು ಸ್ಮಾರ್ಟ್ ಸಿಟಿ ಯೋಜನೆಯನ್ನು ಹಾಳು ಮಾಡುತ್ತಿದ್ದಾರೆ, ಅವ್ಯವಹಾರಕ್ಕೆ ಇವರೇ ಕಾರಣ..!

12-01-21 11:47 am       Mangalore Correspondent   ಕರಾವಳಿ

ಕನ್ಸಲ್ಟೆನ್ಸಿ ಅಧಿಕಾರಿಗಳು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಾಳು ಮಾಡುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದ್ದಾರೆ.‌

ಮಂಗಳೂರು, ಜ.12: ಕನ್ಸಲ್ಟೆನ್ಸಿ ಅಧಿಕಾರಿಗಳು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಾಳು ಮಾಡುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಅವ್ಯವಹಾರಕ್ಕೆ ಇವರು ಕಾರಣ. ನಮ್ಮನ್ನು ಕೂಡ ದಾರಿ ತಪ್ಪಿಸಲು ಯತ್ನ ಮಾಡಿದ್ದರು. ಇವರನ್ನು ಒದ್ದೋಡಿಸುವ ಕೆಲಸ ಆಗಬೇಕು. ಕನ್ಸಲ್ಟನ್ಸಿಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.‌

ಸ್ಮಾರ್ಟ್ ಸಿಟಿ ಕಾಮಗಾರಿಯ ವೈಫಲ್ಯ, ಅವ್ಯವಹಾರ ಮತ್ತು ಇದರಿಂದ ಕಾಮಗಾರಿ ಹಠಾತ್ ಸ್ಥಗಿತಗೊಂಡಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾನಗರ ಪಾಲಿಕೆ ಕಟ್ಟಡದ ಸ್ಮಾರ್ಟ್ ಸಿಟಿ ಕಚೇರಿಯ ಮುಂಭಾಗದಲ್ಲಿ ನಡೆದ  ಪ್ರತಿಭಟನೆಯಲ್ಲಿ ರಮಾನಾಥ ರೈ ಮಾತನಾಡಿದರು. ‌

ಮಂಗಳೂರಿನಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡ್ತಾ ಇಲ್ಲ. ಅಧಿಕಾರ ಹಸ್ತಕ್ಷೇಪ ನಡೆಸುತ್ತಿದ್ದು ಅಧಿಕಾರಿಗಳಿಗೆ ಉಸಿರು ಕಟ್ಟಿದ ವಾತಾವರಣ ಇದೆ. ಒಂದು ಟೆಂಡರ್ ಆದರೆ ಅದನ್ನು ರಾತ್ರೋರಾತ್ರಿ ಬದಲಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಆಡಳಿತ ಇದ್ದಾಗ ಒಳ್ಳೆಯ ಯೋಜ‌ನೆ ತಂದಿದ್ದೇವೆ. ಸ್ಮಾರ್ಟ್ ಸಿಟಿ ಬರುವುದಕ್ಕಾಗಿ ಮಾನದಂಡ ಪಾಲಿಸಿಕೊಂಡು ನೂರಾರು ಮೀಟಿಂಗ್ ಮಾಡಿ, ಯೋಜನೆ ತಂದಿದ್ದೇವೆ. ಈಗ ಸ್ಮಾರ್ಟ್ ಸಿಟಿ ಯೋಜನೆಯಡಿ ಭ್ರಷ್ಟಾಚಾರದ ವಾಸನೆ ಬರ್ತಾ ಇದೆ. ನಾವು ಕೆಲವೇ ಸದಸ್ಯರು ಇದ್ದರೂ ಜೊಲ್ಲು ಸುರಿಸುವ ಜನರಲ್ಲ.  ಮೌಲ್ಯಾಧರಿತ ನಿಲುವಿನಲ್ಲಿ ನಿರಂತರ ಹೋರಾಟ ಮಾಡ್ತಿವಿ. ಕೆಟ್ಟ ಆಡಳಿತಕ್ಕೆ ಕಿವಿ ಹಿಂಡುತ್ತೇವೆ. ತಿಲಾಂಜಲಿ ಇಡುವ ಕೆಲಸ ಮಾಡುತ್ತೇವೆ ಎಂದು ರಮಾನಾಥ ರೈ ಹೇಳಿದರು. 

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, ಕನ್ಸಲ್ಟನ್ಸಿಗಳು ನಮ್ಮ ಆಡಳಿತ ಇದ್ದಾಗಲೂ ದಾರಿ ತಪ್ಪಿಸುವ ಕೆಲಸ ಮಾಡಿದ್ರು. ಈಗಿನ ಆಡಳಿತವನ್ನು ಮೂಗುದಾರ ಇಟ್ಟುಕೊಂಡು ಕುಣಿಸುತ್ತಿದ್ದಾರೆ ಎಂದು ಹೇಳಿದರು. 

ದ.ಕ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಇದು ಮೊದಲ ಹಂತದ ಪ್ರತಿಭಟನೆ. ಅಧಿಕಾರಿಗಳು, ಶಾಸಕರಿಗೆ ಈ ಮೂಲಕ ಎಚ್ಚರಿಕೆ ಗಂಟೆ ನೀಡುತ್ತಿದ್ದೇವೆ. ನಮ್ಮದು ಅಧಿಕಾರಕ್ಕಾಗಿ ಹೋರಾಟ ಅಲ್ಲ. ಅನ್ಯಾಯ, ಅವ್ಯವಹಾರದ ವಿರುದ್ಧ ಅಷ್ಟೇ ಎಂದರು.

Crores of Funds have been misused in the name of Smart City by the leaders of Mangalore city corporation slams congress leaders in their protest in front of city corporation in Mangalore