ಮಾರ್ಚ್ ನಲ್ಲಿ ಸಂಪುಟ ಪುನಾರಚನೆ ; ಕುತೂಹಲ ಮೂಡಿಸಿದ ಜಾರಕಿಹೊಳಿ

13-01-21 04:06 pm       Mangaluru Correspondent   ಕರಾವಳಿ

ಮಾರ್ಚ್ ನಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದೆ. ಸ್ಥಾನ ಸಿಗದವರಿಗೆ ಆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗಲಿದೆ ಎನ್ನುವ ಮೂಲಕ ಹೊಸ ಕುತೂಹಲ ಹುಟ್ಟುಹಾಕಿದ್ದಾರೆ ಸಚಿವ ರಮೇಶ್ ಜಾರಕಿಹೊಳಿ.

ಬೆಳಗಾವಿ, ಜ.13: ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಯಲ್ಲಿ ಆಕಾಂಕ್ಷಿಗಳಿಗೆ ಸ್ಥಾನ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿರುವಾಗಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮಾರ್ಚ್ ನಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದೆ. ಸ್ಥಾನ ಸಿಗದವರಿಗೆ ಆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗಲಿದೆ ಎನ್ನುವ ಮೂಲಕ ಹೊಸ ಕುತೂಹಲ ಹುಟ್ಟುಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ, ಎಲ್ಲರೂ ಅಂದುಕೊಂಡ ರೀತಿ ಈಗ ಏಳು ಮಂದಿಗೆ ಸಚಿವ ಸ್ಥಾನ ಸಿಗುತ್ತಿದೆ. ಇಷ್ಟಕ್ಕೇ ಯಾರು ಕೂಡ ನೊಂದುಕೊಳ್ಳಬಾರದು. ಈಗ ಸಂಪುಟದಲ್ಲಿ ಸ್ಥಾನ ಸಿಗದವರಿಗೆ ಮಾರ್ಚ್, ಎಪ್ರಿಲ್ ನಲ್ಲಿ ನಡೆಯುವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಸ್ಥಾನ ಸಿಗಲಿದೆ. ಈಗ ಯಡಿಯೂರಪ್ಪ ಅವರ ಕೈಬಲಪಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಕಲಬುರ್ಗಿಯಲ್ಲಿ ಮಾಲೀಕಯ್ಯ ಗುತ್ತೇದಾರ್ ಬಲಿಷ್ಠರಿದ್ದು, ಪಕ್ಷ ಕಟ್ಟಿ ದೊಡ್ಡ ವ್ಯಕ್ತಿಯನ್ನು ಸೋಲಿಸಿದ್ದಾರೆ. ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಿದೆ. ನಮ್ಮ ತಂಡದಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಎಚ್.ವಿಶ್ವನಾಥ್ ಸಚಿವರಾಗಲು ಕಾನೂನು ತೊಡಕಿದೆ. ನಾಗೇಶ್ ಅವರನ್ನು ಕೈಬಿಡುತ್ತಿಲ್ಲ. ಯೋಗೀಶ್ವರ್ ಅವರು ಈ ಸರಕಾರ ಬರಲು ಶ್ರಮಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಮುನಿರತ್ನ, ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.

ಯಡಿಯೂರಪ್ಪ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ವಿಶ್ವನಾಥ್ ಅವರು ಹಿರಿಯರಿದ್ದಾರೆ. ಅವರ ಮಾತುಗಳನ್ನು ಆಶೀರ್ವಾದ ಎಂದುಕೊಳ್ಳೋಣ ಎಂದು ಹೇಳಿದರು.