ಕೋವಿಡ್ ಲಸಿಕೆ ಆರಂಭ ; ದ.ಕ. ಜಿಲ್ಲೆಯ ಆರು ಕೇಂದ್ರಗಳಲ್ಲಿ ಲಸಿಕೆ, ಮೊದಲ ದಿನ 600 ಮಂದಿಗಷ್ಟೇ ಅವಕಾಶ !

16-01-21 12:43 pm       Mangalore Correspondent   ಕರಾವಳಿ

ದ. ಕ. ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಲು ಆರಂಭಿಸಲಾಗಿದ್ದು ಮೊದಲಿಗೆ ಡಿ ನೌಕರ ರೋಬಿನ್ ಎಂಬವರಿಗೆ ಮೊದಲ ವ್ಕಾಕ್ಸಿನ್ ನೀಡಲಾಗಿದೆ. 

ಮಂಗಳೂರು, ಜ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಲು ಆರಂಭಿಸಲಾಗಿದ್ದು ಮೊದಲಿಗೆ ಮಂಗಳೂರಿನ ಗ್ರೂಪ್ ಡಿ ನೌಕರ ರೋಬಿನ್ ಎಂಬವರಿಗೆ ಮೊದಲ ವ್ಕಾಕ್ಸಿನ್ ನೀಡಲಾಗಿದೆ. 

ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.‌

ಮಂಗಳೂರು, ಸುರತ್ಕಲ್, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಲಸಿಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವಾದ ಇಂದು ಜಿಲ್ಲೆಯಲ್ಲಿ ಒಟ್ಟು 600 ಆರೋಗ್ಯ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ಯೋಜನೆ ಹಾಕಲಾಗಿದೆ. 

ಜಿಲ್ಲೆಯ ಆರು ಕಡೆ ಕೇಂದ್ರಗಳಿದ್ದು ಏಕಕಾಲದಲ್ಲಿ ತಲಾ 100 ಮಂದಿ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. 

ಮೊದಲಿಗೆ ಡಿ ಗ್ರೂಪ್ ನಲ್ಲಿರುವ ಆರೋಗ್ಯ ಸಿಬಂದಿ, ಆಬಳಿಕ ಅದರ ಮೇಲಿನ ಹಂತದ ಅಧಿಕಾರಿಗಳು, ನರ್ಸ್, ಇನ್ನಿತರ ಸಿಬಂದಿಗೆ ವ್ಯಾಕ್ಸಿನ್ ನೀಡಲು ಯೋಜಿಸಲಾಗಿದೆ. ಆದರೆ, ಲಸಿಕೆಯನ್ನು ಪಡೆಯುವ ಮಂದಿ ಸ್ವತಃ ಕೋವಿಡ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಯಾವುದೇ ಬಲವಂತ ಇಲ್ಲ. ಸ್ವತಃ ನೋಂದಣಿ ಮಾಡಿದವರಿಗೆ ಮಾತ್ರ ವ್ಯಾಕ್ಸಿನ್ ನೀಡಲು ಕೇಂದ್ರ ಸರಕಾರ ಸೂಚನೆ ನೀಡಿದೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 52,381 ಫಲಾನುಭವಿಗಳನ್ನು ಗುರುತಿಸಿದ್ದು ಹಂತ ಹಂತವಾಗಿ ಲಸಿಕೆ ವಿತರಣೆ ನಡೆಯಲಿದೆ. ಮಂಗಳೂರಿನಲ್ಲಿ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ, ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ ತಾಲೂಕು ಆಸ್ಪತ್ರೆ, ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆ, ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಲಸಿಕಾ ಶಿಬಿರವು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಇರಲಿದ್ದು ನೋಂದಣಿ ಮಾಡಿದವರಿಗೆ ದಿನವೂ ವಿತರಣೆ ನಡೆಯಲಿದೆ. 

ಲಸಿಕೆ ಪಡೆದ ಬಳಿಕ ವಿಶ್ರಾಂತಿ ಕಡ್ದಾಯ ! 

ವ್ಯಾಕ್ಸಿನೇಷನ್ ಆದ ನಂತರ ಹಾಗೇ ಹೋಗುವಂತಿಲ್ಲ. ಲಸಿಕೆ ಪಡೆದು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು. ಲಸಿಕೆ ನೀಡಿದ ನಂತರ ಏನಾದ್ರೂ ಅಡ್ಡ ಪರಿಣಾಮ ಕಾಣಿಸಿಕೊಂಡಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಜ್ಞ ವೈದ್ಯರು ಸ್ಥಳದಲ್ಲಿದ್ದು ನಿಗಾ ವಹಿಸಬೇಕು. ಇದಲ್ಲದೆ, 89 ಸರಕಾರಿ ಮತ್ತು 17 ಖಾಸಗಿ ಸಂಸ್ಥೆಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ದಿನ ಮಾತ್ರ ಸರಕಾರಿ ವ್ಯವಸ್ಥೆಯಲ್ಲಿ ಕೇವಲ 600 ಮಂದಿಗೆ ಮಾತ್ರ ಲಸಿಕೆ ದೊರೆಯಲಿದೆ.

ಕಾರ್ಯಕ್ರಮದಲ್ಲಿ ನೂತನ ಸಚಿವ ಎಸ್.ಅಂಗಾರ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಸೇರಿದಂತೆ ಅಧಿಕಾರಿಗಳು, ವಿವಿಧ ಹಂತದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.