35 ಲಕ್ಷ ರೂ.‌ ಗಿಫ್ಟ್ ಆಸೆಗೆ ಬಿದ್ದು 1.35 ಲಕ್ಷ ಕಳಕೊಂಡ ಆಸೆ ಬುರುಕ !

28-01-21 11:25 am       Mangalore Correspondent   ಕರಾವಳಿ

ಚಿನ್ನ ಹಾಗೂ ವಜ್ರ ಉಡುಗೊರೆ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು, ಜ.28 : ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯ 35 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು 1.35 ಲಕ್ಷ ರೂ. ಕಳಕೊಂಡಿದ್ದಾರೆ. 

ಫೇಸ್‌ಬುಕ್‌ನಲ್ಲಿ ಜ.3ರಂದು ರೆನಾಲ್ಟ್ ಫ್ರಿನ್ಸ್ ಕ್ರಿಸ್ಟಫರ್ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿ ಚಾಟಿಂಗ್ ನಡೆಸುತ್ತಿದ್ದು, ಭಾರೀ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದರು. ಜ.18ರಂದು ಮಹಿಳೆಯೊಬ್ಬಳು ಕರೆ ಮಾಡಿ, ದಿಲ್ಲಿ ಕಸ್ಟಮ್ ಆಫೀಸರ್ ಎಂದು ಹೇಳಿದ್ದಳು. ಏರ್‌ಪೋರ್ಟ್‌ಗೆ ಪಾರ್ಸೆಲ್ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್ ಎಂದು ಹೇಳಿ, 30 ಸಾವಿರ ರೂ. ವರ್ಗಾವಣೆ ಮಾಡುವಂತೆ ಹೇಳಿದ್ದರು.

ಜ.20ರಂದು ಮತ್ತೆ ಕರೆ ಮಾಡಿದ್ದ ಮಹಿಳೆ ಬೇರೆ ಬೇರೆ ಕಾರಣಗಳನ್ನೊಡ್ಡಿ ಮತ್ತೆ 1.05 ಲಕ್ಷ ರೂ. ವಿವಿಧ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದರು. ಹಂತ ಹಂತವಾಗಿ ಒಟ್ಟು 1.35 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ನೊಂದ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ.

Man deceived by Online Cyber Fraud lost Rs 1.35 Lakhs by fraudster who deceived him on Facebook in Mangalore