ಮಾಜಿ ಡಾನ್ ಎಕ್ಕೂರು ಬಾಬಾ ಕೊರೊನಾ ಸೋಂಕಿಗೆ ಬಲಿ

14-08-20 06:57 pm       Mangalore Crime Reporter   ಕರಾವಳಿ

25-30 ವರ್ಷಗಳ ಹಿಂದೆ ಕರಾವಳಿಯಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಸದ್ದು ಮಾಡಿದ್ದ ಎಕ್ಕೂರು ಬಾಬಾ ಅಲಿಯಾಸ್ ಶುಭಕರ ಶೆಟ್ಟಿ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

ಮಂಗಳೂರು, ಆಗಸ್ಟ್ 14: 25-30 ವರ್ಷಗಳ ಹಿಂದೆ ಕರಾವಳಿಯಲ್ಲಿ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಸದ್ದು ಮಾಡಿದ್ದ ಎಕ್ಕೂರು ಬಾಬಾ ಅಲಿಯಾಸ್ ಶುಭಕರ ಶೆಟ್ಟಿ (61) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ಶುಭಕರ ಶೆಟ್ಟಿ ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಉಸಿರಾಟದ ಸಮಸ್ಯೆ ಬಿಗಡಾಯಿಸಿದ ಹಿನ್ನೆಲೆ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಇಂದು ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಈ ನಡುವೆ, ಹೃದಯಾಘಾತಕ್ಕೆ ಒಳಗಾಗಿದ್ದ ಶುಭಕರ ಶೆಟ್ಟಿ ಸಂಜೆ ಹೊತ್ತಿಗೆ ಮೃತಪಟ್ಟಿದ್ದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. 

ಮುಡಿಪುವಿನ ಪೃಥ್ವಿಪಾಲ್ ರೈ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಎಕ್ಕೂರು ಬಾಬಾ ಕಳೆದ ಹತ್ತು ವರ್ಷಗಳಲ್ಲಿ ರೌಡಿಸಂನಿಂದ ದೂರವಿದ್ದು ಟ್ಯಾಂಕರ್, ಕಲ್ಲಿನ ಕೋರೆ ಹೀಗೆ ಇತರೇ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. 

ಶುಭಕರ ಶೆಟ್ಟಿ ಎಕ್ಕೂರು ಬಾಬಾ ಆಗಿದ್ದು ಹೇಗೆ ಗೊತ್ತಾ..?

ಶುಭಕರ ಶೆಟ್ಟಿ ರೌಡಿಸಂಗೆ ಕಾಲಿರಿಸಿದ್ದು 1983ರಲ್ಲಿ. ಸಣ್ಣ ಪುಟ್ಟ ಹಫ್ತಾ ವಸೂಲಿ ಮಾಡುತ್ತಿದ್ದ ಶುಭಕರ ಶೆಟ್ಟಿಯನ್ನು ಕಂಕನಾಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಆಗ ಶುಭಕರ್ ಗೆ ಬರೀಯ 21 ವರ್ಷ. ಹೀಗೆ ರೌಡಿಸಂ ಲೋಕಕ್ಕೆ ಎಂಟ್ರಿ ಪಡೆದ ಶುಭಕರ ಶೆಟ್ಟಿ ಎಕ್ಕೂರು ಬಾಬಾ ಹೆಸರಲ್ಲಿ ಡಾನ್ ಆಗಿ ಹೆಸರು ಗಳಿಸಿದ್ದೇ ರೋಚಕ. ಎಕ್ಕೂರಿನಲ್ಲಿ ಯುವಸೇನೆ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡಿದ್ದ ಗುಣಕರ ಶೆಟ್ಟಿ 1991 ರಲ್ಲಿ ಕೊಲೆಯಾಗಿದ್ದರು. ಈ ಕೊಲೆಯ ಬಳಿಕ ಎಕ್ಕೂರಿನಲ್ಲಿ ಪ್ರಬಲನಾದ ಶುಭಕರ ಶೆಟ್ಟಿ ತನ್ನದೇ ಹುಡುಗರನ್ನು ಕಟ್ಟಿಕೊಂಡು ಗ್ಯಾಂಗ್ ರೂಪ ಕೊಟ್ಟಿದ್ದ‌. ನಿಧಾನಕ್ಕೆ ಹಿಂದು ಪರ ಡಾನ್ ಎಂಬ ಹೆಸರನ್ನೂ ಗಳಿಸಿದ ಶುಭಕರ ಶೆಟ್ಟಿ ಎಕ್ಕೂರು ಕೇಂದ್ರೀಕರಿಸಿ ತನ್ನ ಚಟುವಟಿಕೆ ಆರಂಭಿಸಿದ್ದು ಜಾಗದ ಹೆಸರಲ್ಲೇ ಗ್ಯಾಂಗ್ ರೂಪ ಪಡೆಯುವಂತಾಗಿತ್ತು. ಸ್ಥಳೀಯ ಹುಡುಗರು ಆತನನ್ನು ಬಾಬಣ್ಣ ಎಂದು ಕರೆಯುತ್ತಿದ್ದುದೇ ಶುಭಕರ ಶೆಟ್ಟಿಗೆ ಮುಂದೆ ಎಕ್ಕೂರು ಬಾಬಾ ಅನ್ನುವ ಅನ್ವರ್ಥನಾಮ ಹುಟ್ಟುವಂತಾಗಿತ್ತು. ಹಣದ ವಹಿವಾಟಿನ ಪಂಚಾತಿಕೆ, ಕೋಳಿ ಅಂಕದ ಸವಾಲ್, ಕೊಲೆಗೆ ಸ್ಕೆಚ್, ಸುಪಾರಿ ಕಿಲ್ಲಿಂಗ್, ಹೀಗೆ ಅಪರಾಧ ಲೋಕದ ಎಲ್ಲ ಮಗ್ಗುಲುಗಳಲ್ಲೂ ಚಟುವಟಿಕೆ ವಿಸ್ತರಿಸಿದ್ದ ಬಾಬಾ, 1995 ರಿಂದ 2005 ರ ಮಧ್ಯೆ ಮಂಗಳೂರಿನಲ್ಲಿ ಸ್ವಲ್ಪಮಟ್ಟಿಗೆ ಹೆಸರನ್ನೂ ಮಾಡಿದ್ದ. 2002ರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಿದ್ದ ಪೃಥ್ವಿಪಾಲ್ ರೈಯನ್ನು ಮುಡಿಪುವಿನ ಮಂಗಳಾ ಬಾರ್ ನಲ್ಲಿ ಎಟ್ಯಾಕ್ ಮಾಡಿ ಕೊಲ್ಲುವಂತೆ ಸ್ಕೆಚ್ ರೂಪಿಸಿದ್ದು ಇದೇ ಎಕ್ಕೂರು ಗ್ಯಾಂಗ್. ಆವಾಗೆಲ್ಲ ಸಂಜೆ ಪತ್ರಿಕೆಗಳಲ್ಲಿ ಎಕ್ಕೂರು ಬಾಬಾ ಮಿಂಚಿದ್ದ ಹೆಸರು. ಮಂಗಳೂರಿನ ಒಂದು ಗಲ್ಲಿ ಮಾತ್ರ ಆಗಿದ್ದ ಎಕ್ಕೂರು ಹೆಸರಿನಲ್ಲೇ ಗ್ಯಾಂಗ್ ಕಟ್ಟಿ ಮೆರೆದಾಡಿದ್ದೇ ಶುಭಕರ ಶೆಟ್ಟಿಗೆ ಬಾಬಾ ಆಗಿ ಪ್ರಸಿದ್ಧಿ ಮತ್ತು ಕುಖ್ಯಾತಿಯನ್ನೂ ಪಡೆಯುವಂತಾಗಿತ್ತು.

ಕಳೆದ 15 ವರ್ಷಗಳಲ್ಲಿ ಯುವಸೇನೆಯಲ್ಲಿ ಗುರುತಿಸಿಕೊಂಡಿದ್ದ ಎಕ್ಕೂರು ಬಾಬಾ, ಮಂಗಳೂರಿನ ನೆಹರು ಮೈದಾನದ ಗಣೇಶೋತ್ಸವ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಉಳಿದಂತೆ ಹೊರಗೆ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. ಅಪರೂಪಕ್ಕೆ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದರು. ಜೊತೆಗಿದ್ದ ಹುಡುಗರೂ ತಮ್ಮ ತಮ್ಮ ಚಟುವಟಿಕೆಯಲ್ಲಿ ಬಿಝಿಯಾಗಿದ್ದು ಮತ್ತು ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಶುರು ಮಾಡಿದ್ದು ಎಕ್ಕೂರು ಗ್ಯಾಂಗ್ ಬಲ ಕಳಕೊಳ್ಳುವಂತಾಗಿತ್ತು.