ಮರಾಠಿಗರು ಇದ್ದಾರೆಂದು ಬೆಳಗಾವಿ ಬಿಡಕ್ಕಾಗತ್ತಾ..? ಮರಾಠಿಗರು ಇಡೀ ರಾಜ್ಯದಲ್ಲಿದ್ದಾರೆ ; ಸವದಿ ಪ್ರಶ್ನೆ

30-01-21 04:10 pm       Mangalore Correspondent   ಕರಾವಳಿ

ತಮ್ಮಲ್ಲೇ ಮೂರು ಬಾಗಿಲು ಮಾಡಿಕೊಂಡಿರುವ ಮಂದಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಗಡಿ ಕ್ಯಾತೆಯ ಹೇಳಿಕೆ ಹರಿಯ ಬಿಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮಂಗಳೂರು, ಜ.30: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರಕಾರ ನಡೆಸುತ್ತಿದ್ದು, ತಮ್ಮಲ್ಲೇ ಕಚ್ಚಾಟ ಮಾಡುತ್ತಿವೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವ ರೀತಿ ಅಲ್ಲಿನ ಸ್ಥಿತಿಯಿದೆ. ತಮ್ಮಲ್ಲೇ ಮೂರು ಬಾಗಿಲು ಮಾಡಿಕೊಂಡಿರುವ ಮಂದಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಗಡಿ ಕ್ಯಾತೆಯ ಹೇಳಿಕೆ ಹರಿಯ ಬಿಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕಾರ್ಯಕ್ರಮ ನಿಮಿತ್ತ ಮಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಲಕ್ಷ್ಮಣ ಸವದಿ, ಕಾರ್ಯಕರ್ತರ ಸನ್ಮಾನ ಸ್ವೀಕರಿಸಿದ ಬಳಿಕ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

ಮಹಾರಾಷ್ಟ್ರ ಸಿಎಂ ಉದ್ಧವ್, ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಕಾರವಾರ, ಬೆಳಗಾವಿ, ನಿಪ್ಪಾಣಿ ತಮ್ಮದೆಂದು ಹೇಳುತ್ತಿದ್ದಾರೆ. ಮರಾಠಿ ಭಾಷಿಗರು ಈ ಭಾಗದಲ್ಲಿ ಇದ್ದಾರೆಂದು ಅಲ್ಲಿನ ಭಾಗವನ್ನು ಮಹಾರಾಷ್ಟ್ರ ಎನ್ನಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಸವದಿ, ಮರಾಠಿ ಮಾತನಾಡುವ ಮಂದಿ ಇಡೀ ಕರ್ನಾಟಕದಲ್ಲಿ ಇದ್ದಾರೆ. ಉತ್ತರ ಕರ್ನಾಟಕ ಹಲವೆಡೆ ಮರಾಠಿ ಭಾಷೆ ಮಾತನಾಡುವ ಮಂದಿ ವಾಸವಿದ್ದಾರೆ. ಹಾಗೆಂದು ಮುಂಬೈನಲ್ಲಿ ಕನ್ನಡ ಮಾತನಾಡುವ ಮಂದಿ ಬಹಳಷ್ಟು ಮಂದಿ ಇದ್ದಾರೆ. ಕರಾವಳಿ ಭಾಗದಿಂದ ಹೋಗಿ ಅಲ್ಲಿ ನೆಲೆಸಿದವರು ಕನ್ನಡ, ತುಳು ಮಾತನಾಡುತ್ತಾರೆ. ಹಾಗೆಂದು ಮುಂಬೈಯನ್ನು ಕರ್ನಾಟಕಕ್ ಕೊಡಿ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಪರಿಗಣಿಸಲಾಗಿದೆ. ಅಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದನ್ನು ಮಾಡಿಕೊಂಡು ಬಂದಿದ್ದೇವೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಮೇಲೆ ಹಕ್ಕು ಸ್ಥಾಪಿಸುವ ಹೇಳಿಕೆ ನೀಡುವುದೇ ಅಸಂಬದ್ಧ. ಮಹಾರಾಷ್ಟ್ರ ನಾಯಕರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಕರಾವಳಿ ಕಾರ್ಯಕರ್ತರ ಬಗ್ಗೆ ಹೆಮ್ಮೆ

ಇದಕ್ಕೂ ಮುನ್ನ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸವದಿ, ಬೇರೆ ಕಡೆಗೆ ಹೋಲಿಸಿದರೆ ಕರಾವಳಿ ಭಾಗದ ಕಾರ್ಯಕರ್ತರು ಪಕ್ಷದ ಬಗ್ಗೆ ಹೆಚ್ಚು ಅಭಿಮಾನ, ಗೌರವ ಇದ್ದವರು. ಹಾಗಾಗಿ ಇಲ್ಲಿನ ಕಾರ್ಯಕರ್ತರ ಬಗ್ಗೆ ವಿಶೇಷ ಗೌರವ ಇದೆ. ನನ್ನಿಂದ ಯಾವುದೇ ರೀತಿಯ ಕೆಲಸಗಳಾಗಬೇಕಿದ್ದರೂ, ಕಾರ್ಯಕರ್ತರು ನೇರವಾಗಿ ಫೋನ್ ಮಾಡಬಹುದು. ಬೆಂಗಳೂರಿನ ಮನೆ ಮತ್ತು ಕಚೇರಿಯಲ್ಲಿ ಸದಾ ಲಭ್ಯನಿದ್ದೇನೆ. ಬಂದು ಭೇಟಿ ಮಾಡಬಹುದು ಎಂದು ಹೇಳಿದರು.