ಪ್ರತಾಪಚಂದ್ರ ಶೆಟ್ಟಿಯನ್ನು ಇಳಿಸಲು ಬಿಜೆಪಿ- ಜೆಡಿಎಸ್ ಹುನ್ನಾರ ; ಬಂಟ ಸಮುದಾಯಕ್ಕೆ ಅವಮಾನ !

02-02-21 06:15 pm       Mangalore Correspondent   ಕರಾವಳಿ

ಸಜ್ಜನ ರಾಜಕಾರಣಿಯಾಗಿರುವ ಪ್ರತಾಪಚಂದ್ರ ಶೆಟ್ಟಿಯವರನ್ನು ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಸಭಾಪತಿ ಸ್ಥಾನದಿಂದ ಇಳಿಸಲು ಪಿತೂರಿ ಮಾಡಿದೆ.

ಮಂಗಳೂರು, ಫೆ.2 : ಮೂರು ಬಾರಿ ಶಾಸಕರಾಗಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಜ್ಜನ ರಾಜಕಾರಣಿಯಾಗಿರುವ ಕರಾವಳಿಯ ಪ್ರಬಲ ಬಂಟ ಸಮುದಾಯದ ಪ್ರತಾಪಚಂದ್ರ ಶೆಟ್ಟಿಯವರನ್ನು ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಸಭಾಪತಿ ಸ್ಥಾನದಿಂದ ಇಳಿಸಲು ಪಿತೂರಿ ಮಾಡಿದೆ. ಅವರನ್ನು ಬಲವಂತವಾಗಿ ರಾಜೀನಾಮೆ ಪಡೆಯಲು ಯತ್ನಿಸುತ್ತಿರುವ ಬೆಳವಣಿಗೆ ಕರಾವಳಿಯ ಜಿಲ್ಲೆಗೆ ಹಾಗೂ ಬಂಟ ಸಮುದಾಯಕ್ಕೆ ಮಾಡುತ್ತಿರುವ ಅವಮಾನ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಆರೋಪಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಭಾಪತಿಯ ಅಧಿಕಾರಾವಧಿ ಮುಗಿಯದೆ ಅವರನ್ನು ರಾಜೀನಾಮೆ ಕೊಡಿಸುವ ಅಥವಾ ಕೆಳಗಿಳಿಸುವ ಪ್ರಯತ್ನ ನಡೆದಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್ ಆ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು. 

ಪ್ರತಾಪಚಂದ್ರ ಶೆಟ್ಟಿ ಶ್ರೀಮಂತ ಕುಟಂಬದವರಾಗಿದ್ದು, ವಿಜಯ ಬ್ಯಾಂಕ್ ಅಧಿಕಾರಿಯಾಗಿದ್ದಾಗ ರಾಜಕೀಯ ಸೇವೆಯ ಉದ್ದೇಶದಿಂದ ಕೆಲಸ ತೊರೆದವರು. ಮೂರು ಬಾರಿ ಶಾಸಕರಾಗಿ ಜನಸೇವೆ ಸಲ್ಲಿಸಿದ್ದರೂ ಮಂತ್ರಿಗಿರಿಗಾಗಿ ಹಾತೊರೆದವರಲ್ಲ. ಭ್ರಷ್ಟಾಚಾರ ರಹಿತ ಹೆಮ್ಮೆಯ ರಾಜಕಾರಣಿಗೆ ಈ ರೀತಿ ಅವಮಾನ ಮಾಡುತ್ತಿರುವುದನ್ನು ಕಂಡು ಬೇಸರವಾಗುತ್ತಿದೆ. ಅಧಿಕಾರ ದಾಹದಿಂದ ಬಿಜೆಪಿ ಹಾಗೂ ಜೆಡಿಎಸ್ ಈ ಕೃತ್ಯ ನಡೆಸುತ್ತಿದೆ ಎಂದು ಆರೋಪಿಸಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಪ್ರತಾಪಚಂದ್ರ ಶೆಟ್ಟಿಯವರನ್ನು ರಾಜೀನಾಮೆಗೆ ಮುಂದಾಗಿಸಿರುವ ಈ ಬೆಳವಣಿಗೆ ಕಂಡು ಕೇಳರಿಯದ ಘಟನೆಗೆ ಸಾಕ್ಷಿಯಾಗುತ್ತಿದೆ. ಇದು ಬಂಟ ಸಮುದಾಯಕ್ಕೆ ಮಾಡಲಾಗುತ್ತಿರುವ ವಿಶ್ವಾಸದ್ರೋಹ ಎಂದರು.

ಗೋಷ್ಠಿಯಲ್ಲಿ ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಉಸ್ಥಿತರಿದ್ದರು.

Bjp and Jds are trying to Dismiss Prathachandra Shetty from the Position of Speaker says Abhayachandra Jain and Mithun Rai at a press meet held at Mangalore.