ಸುಬ್ರಹ್ಮಣ್ಯ ; ಬೋನು, ಬಲೆ ಹಿಡಿದು ಕಾದ ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಚಿರತೆ

03-02-21 06:13 pm       Mangalore Correspondent   ಕರಾವಳಿ

ಬೆಳಗ್ಗಿನಿಂದ ಬೋನು, ಬಲೆ ಹಿಡಿದು ಕಾರ್ಯಾಚರಣೆ ಮಾಡಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಯೇ ಚಿರತೆ ಪರಾರಿಯಾಗಿದೆ.

ಸುಬ್ರಹ್ಮಣ್ಯ, ಫೆ.3: ಕೊನೆಗೂ ಅರಣ್ಯಾಧಿಕಾರಿಗಳ ಆಪರೇಶನ್ ಚಿರತೆ ಠುಸ್ಸಾಯ್ತು. ಬೆಳಗ್ಗಿನಿಂದ ಬೋನು, ಬಲೆ ಹಿಡಿದು ಕಾರ್ಯಾಚರಣೆ ಮಾಡಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಯೇ ಚಿರತೆ ಪರಾರಿಯಾಗಿದೆ.

ಬೆಳಗ್ಗಿನಿಂದಲೇ ಅರಣ್ಯಾಧಿಕಾರಿಗಳು ಒಂದೆಡೆ ಬೋನು, ಮತ್ತೊಂದು ಕಡೆ ಬಲೆ ಹಿಡಿದು ಚಿರತೆಯನ್ನು ಹಿಡಿಯಲು ಹರಸಾಹಸ ಮಾಡಿದ್ದರು. ಚಿರತೆ ಇನ್ನೇನು ಕೈಗೆ ಸಿಕ್ಕೇಬಿಡ್ತು ಎನ್ನುವಾಗಲೇ ಒಮ್ಮೆಗೆ ಹೊರಗೆ ಬಂದಿದ್ದ ಚಿರತೆ ಬಲೆಯೊಳಗೆ ಸಿಲುಕುತ್ತಲೇ ಎಗರಾಡಿದೆ. ಬಲೆಯನ್ನು ಕಚ್ಚಿ ಹೊರಗೆ ಓಡುವ ಪ್ರಯತ್ನದಲ್ಲಿದ್ದಾಗಲೇ ಬಲೆ ತುಂಡಾಯಿತೋ ಏನೋ ಗೊತ್ತಿಲ್ಲ. ಬಲೆಯ ಅಡಿಭಾಗದಿಂದ ಚಿರತೆ ಹೊರಬಂದಿದ್ದು ಜನರನ್ನು ನೋಡಿ ಬೆದರಿ ಓಟಕ್ಕಿತ್ತಿದ್ದು ಪೊದೆಗಳ ನಡುವೆ ಓಡಿ ಪರಾರಿಯಾಗಿದೆ.

ಒಮ್ಮೆಗೆ ಚಿರತೆ ಹೊರಗೆ ಬಂದಿದ್ದು ಗೊತ್ತಾಗುತ್ತಲೇ ಅಲ್ಲಿ ಸೇರಿದ್ದ ಪರಿಸರ ಜನರು, ಪೊಲೀಸರು, ಮಾಧ್ಯಮದ ವ್ಯಕ್ತಿಗಳು ಕೂಡ ಚಿರತೆಯ ಬಗ್ಗೆ ಹೆದರಿ ಓಟಕ್ಕಿತ್ತಿದ್ದಾರೆ. ಅತ್ತ ಚಿರತೆಯೂ ಓಡಿದ್ದು, ಅದಾಗಲೇ ಕಾಡಿನಲ್ಲಿ ಮರೆಯಾಗಿತ್ತು. ಇಂದು ಮುಂಜಾವಿನ ವೇಳೆಗೆ, ಸುಬ್ರಹ್ಮಣ್ಯ ಬಳಿಯ ಕೈಕಂಬದ ರೇಗಪ್ಪ ಎಂಬವರ ಮನೆ ಆವರಣಕ್ಕೆ ಬಂದಿದ್ದ ಚಿರತೆ ನಾಯಿಯನ್ನು ಹಿಡಿಯಲೆಂದು ಬೆನ್ನಟ್ಟಿ ಬಂದಿತ್ತು. ನಾಯಿ ಪ್ರಾಣ ಭಯದಲ್ಲಿ ಮನೆಯ ಟಾಯ್ಲೆಟ್ ಕೋಣೆಗೆ ಹೊಕ್ಕಿತ್ತು. ಇದೇ ವೇಳೆ, ನಾಯಿಯನ್ನು ಹುಡುಕುತ್ತಾ ಹಿಂದೆ ಓಡಿದ್ದ ಮನೆಯಲ್ಲಿದ್ದ ಮಹಿಳೆ ಒಳಗೆ ಚಿರತೆ ಇರುವುದನ್ನು ಕಂಡು ಟಾಯ್ಲೆಟಿಗೆ ಬಾಗಿಲು ಹಾಕಿದ್ದಾರೆ.

ಆಬಳಿಕ ಸ್ಥಳೀಯರು ಸೇರಿದ್ದು ಅರಣ್ಯಾಧಿಕಾರಿಗಳು ಮತ್ತು ಸುಬ್ರಹ್ಮಣ್ಯ ಪೊಲೀಸರನ್ನು ಕರೆಸಿದ್ದಾರೆ. ಚಿರತೆ ಹಿಡಿಯಲೆಂದು ಬೋನು, ಹಗ್ಗ, ಬಲೆ ಎಲ್ಲವನ್ನೂ ಸ್ಥಳಕ್ಕೆ ತಂದು ಏನೋ ಆಪರೇಶನ್ ಮಾಡಲು ಪ್ಲಾನ್ ಹಾಕಿದ್ದರು. ಆದರೆ, ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬಲೆಯ ನಡುವಿನಿಂದಲೇ ತಪ್ಪಿಸಿಕೊಂಡು ಮೇಲ್ಛಾವಣಿ ಹಾರಿ ತಪ್ಪಿಸಿಕೊಂಡಿದ್ದು ಸುಬ್ರಹ್ಮಣ್ಯದಲ್ಲಿ ಜನರ ಬಾಯಲ್ಲಿ ಹಾಸ್ಯದ ನಗೆ ಉಗ್ಗಿಸಿದೆ.

Read: ಸುಬ್ರಹ್ಮಣ್ಯ ; ನಾಯಿ ಅಟ್ಟಿಸಿ ಬಂದು ಟಾಯ್ಲೆಟ್ ಒಳಗೆ ಸಿಕ್ಕಿಬಿದ್ದ ಚಿರತೆ !