ತೆರಿಗೆ ಪಾವತಿಗೆ ಅಲೆದಾಡುತ್ತೀರಾ ; ನಗರಸಭೆ ಅಧಿಕಾರಿಗಳೇ ಬರಲಿದ್ದಾರೆ ಮನೆ ಬಾಗಿಲಿಗೆ !

05-02-21 04:02 pm       Mangalore Correspondent   ಕರಾವಳಿ

ತೆರಿಗೆ ಪಾವತಿಗಾಗಿ ಜನಸಾಮಾನ್ಯರು ಕಚೇರಿ ಅಲೆದಾಡುವುದನ್ನು ತಪ್ಪಿಸಲು ನಗರಸಭೆ ಅಧಿಕಾರಿಗಳೇ 31 ವಾರ್ಡ್ ಗಳ ಆಯ್ದ ಸ್ಥಳಗಳಲ್ಲಿ ಶಿಬಿರ ನಡೆಸಲು ಮುಂದಾಗಿದೆ. 

ಉಳ್ಳಾಲ, ಫೆ.4: ಉಳ್ಳಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಕಟ್ಟಡ ತೆರಿಗೆ, ನೀರಿನ ಬಿಲ್ ಬಾಕಿ ಬಹಳಷ್ಟು ಮಂದಿಯದ್ದಿದೆ. ತೆರಿಗೆ ಪಾವತಿಗಾಗಿ ಜನಸಾಮಾನ್ಯರು ಕಚೇರಿ ಅಲೆದಾಡುವುದನ್ನು ತಪ್ಪಿಸಲು ನಗರಸಭೆ ಅಧಿಕಾರಿಗಳೇ ವಾರದ ಪ್ರತಿ ಗುರುವಾರ 31 ವಾರ್ಡ್ ಗಳ ಆಯ್ದ ಸ್ಥಳಗಳಲ್ಲಿ ಶಿಬಿರ ನಡೆಸಲು ಮುಂದಾಗಿದೆ. 

ಈ ಬಗ್ಗೆ ನಗರಸಭೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಆಯೂಬ್ ಮಂಚಿಲ ಮಾಹಿತಿ ನೀಡಿದರು. ಮೀಸಲಾತಿ ಕಾನೂನಿನ ತೊಡಕಲ್ಲಿ ಎರಡು ವರ್ಷಗಳ ಕಾಲ ನಗರಸಭೆಯಲ್ಲಿ ಅಧಿಕಾರ ಇರಲಿಲ್ಲ. ಕಳೆದ ಎರಡೂವರೆ ತಿಂಗಳಿಂದ ಹೊಸ ಆಡಳಿತ ಬಂದಿದೆ. ನಗರದ 31 ವಾರ್ಡ್ ಗಳ ವಾಣಿಜ್ಯ, ವಸತಿ ಕಟ್ಟಡಗಳ ತೆರಿಗೆ ಮತ್ತು ನೀರಿನ ಬಿಲ್ ಸರಿಯಾಗಿ ಪಾವತಿಯಾಗದೆ ಬಾಕಿ ಉಳಿದಿದೆ. ನಗರ ವ್ಯಾಪ್ತಿಯಲ್ಲಿ ಬಹಳಷ್ಟು ಉದ್ಯಮಗಳು ನಡೆಯುತ್ತಿದ್ದು, ಶೇಕಡ ಮೂವತ್ತರಷ್ಟು ಉದ್ದಿಮೆಗಳು ಪರಾವನಿಗೆ ಪಡೆದಿಲ್ಲ ಎಂದು ತಿಳಿದಿದೆ. ಜನರು ನಗರಸಭೆಗೆ ನೀರಿನ ಬಿಲ್ , ಕಟ್ಟಡ ತೆರಿಗೆ ಪಾವತಿಸಲು ಬರುವುದನ್ನು ತಪ್ಪಿಸಲು ನಾವೇ ಜನರ ಬಳಿಗೆ ಹೋಗಿ ನೀರು ಬಿಲ್, ತೆರಿಗೆ ಕಲೆಕ್ಟ್ ಮಾಡುವುದಲ್ಲದೆ ಉದ್ಯಮ ಪರವಾನಿಗೆ ಆನ್ ದಿ ಸ್ಪಾಟ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. 

ಮುಂದಿನ ಫೆ.11 ರಿಂದ ನಗರ ವ್ಯಾಪ್ತಿಯ 9 ಕಡೆಗಳಲ್ಲಿ ಪ್ರತೀ ಗುರುವಾರ ಬೆಳಗ್ಗೆ 10 ರಿಂದ ಸಂಜೆ 4 ರ ತನಕ ಶಿಬಿರದ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 11 ನೇ ಗುರುವಾರ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ನಗರಸಭೆಯ ವಾಣಿಜ್ಯ ಸಂಕೀರಣದಲ್ಲಿ ಇದಕ್ಕೆ ಚಾಲನೆ ದೊರೆಯಲಿದ್ದು, ನಂತರದ ಪ್ರತೀ ಗುರುವಾರ ಉಳ್ಳಾಲ  ಧರ್ಮನಗರ ಶಾಲೆ, ತೊಕ್ಕೊಟ್ಟು ಅಂಬೇಡ್ಕರ್ ರಂಗಮಂದಿರ, ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ, ಮೇಲಂಗಡಿ ಉರ್ದು ಶಾಲೆ, ಬಬ್ಬುಕಟ್ಟೆ ಸರಕಾರಿ ಶಾಲೆ, ಅಲೇಕಳ ಮದನಿ ಜೂನಿಯರ್ ಕಾಲೇಜು, ಪಟ್ಲ ಶಾಲೆ, ಮಾಸ್ತಿಕಟ್ಟೆ ಹಝ್ರತ್ ಶಾಲೆಗಳಲ್ಲಿ ಶಿಬಿರ ನಡೆಯಲಿದೆ ಎಂದರು. 

ನಗರ ಆಯುಕ್ತರಾದ ರಾಯಪ್ಪ ಮಾತನಾಡಿ, ಉದ್ಯಮಗಳಿಗೆ ಸರಿಯಾದ ದಾಖಲೆ ಇದ್ದಲ್ಲಿ ಅಲ್ಲೇ ಪರವಾನಿಗೆ ನೀಡುವ ವ್ಯವಸ್ಥೆ ಮಾಡುತ್ತೇವೆ. ಸಮರ್ಪಕ ದಾಖಲೆ ನೀಡಿದಲ್ಲಿ ಕಟ್ಟಡ ಪರವಾನಿಗೆ ಗಳನ್ನು ಸ್ಥಳದಲ್ಲೇ ನೀಡಲಾಗುವುದು. ಇದರಿಂದ ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪುವುದು. ಇದರ ಬಗ್ಗೆ ನಾವು ಧ್ವನಿವರ್ಧಕ ಬಳಸಿ ಸಾರ್ವಜನಿಕವಾಗಿ ಪ್ರಚಾರವನ್ನು ಮಾಡುತ್ತೇವೆ. ಮೇ ವರೆಗೆ ಬಿಲ್, ತೆರಿಗೆ ಪಾವತಿಸುವವರಿಗೆ ಯಾವುದೇ  ದಂಡ ಇರುವುದಿಲ್ಲ. ಎಪ್ರಿಲ್ 30 ರ ಒಳಗೆ ಪಾವತಿಸಿದವರಿಗೆ 5 ಶೇಕಡ ರಿಯಾಯಿತಿ ಇದೆ. ನಗರಸಭೆಯಲ್ಲಿ ಕಂದಾಯ ಅಧಿಕಾರಿ ಇಲ್ಲ , ಸಿಬ್ಬಂದಿಗಳ ಕೊರತೆಯಿಂದಲೂ ತೆರಿಗೆ, ಬಿಲ್ ಬಾಕಿ ಉಳಿದಿದೆ ಎಂದರು. ನಗರ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಇದ್ದರು.

Hereafter authorities from Ullal Town Municipality to collect taxes from house to house said vice director Ayub.