ಪಣಂಬೂರು ಕಡಲ ತೀರದಲ್ಲಿ ಉದಯಿಸಿತು ತ್ರಿವರ್ಣ 

15-08-20 08:03 pm       Mangalore Reporter   ಕರಾವಳಿ

ಮಂಗಳೂರಿನ ಪಣಂಬೂರಿನ ಕಡಲ ತೀರದಲ್ಲಿ ಯುವ ಕಲಾವಿದರು ತಮ್ಮ ಕೈಚಳಕ ತೋರಿದ್ದಾರೆ. ಯುವ ಕಲಾವಿದರು ಸೇರಿ ರಚಿಸಿದ ಈ ಕಲಾಕೃತಿ ನೋಡುಗರ ಗಮನ ಸೆಳೆದಿದೆ.

ಮಂಗಳೂರು, ಆಗಸ್ಟ್ 15: 74ನೆ ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಸಡಗರ ಇಲ್ಲದೆ ಕೊನೆಯಾಗಿದೆ. ಆದರೆ, ಎಂದಿನ ಸಡಗರ ಇಲ್ಲದಿದ್ದರೂ ಇದ್ದುದರಲ್ಲಿ ಸಂತಸ ಪಡುವುದಕ್ಕೇನು ಕೊರತೆ ಇರಲಿಲ್ಲ.‌ ಕಲಾವಿದರು ತಮ್ಮ ಕೈಚಳಕ ತೋರುವುದಕ್ಕೆ ಅಡ್ಡಿಯೂ ಇರಲಿಲ್ಲ. 

ಮಂಗಳೂರಿನ ಪಣಂಬೂರಿನ ಕಡಲ ತೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ವಾತಂತ್ರ್ಯ ದಿನಕ್ಕೆ ಮರಳು ಶಿಲ್ಪದ ಮೂಲಕ ಸ್ವಾತಂತ್ರ್ಯ ವೀರರಿಗೆ ನಮನ ಸಲ್ಲಿಸುವ ಸಂಪ್ರದಾಯ ನಡೆದುಬಂದಿದೆ. ಈ ಬಾರಿಯೂ ಮಂಗಳೂರಿನ ಯುವ ಕಲಾವಿದರು ತಮ್ಮ ಕೈಚಳಕ ತೋರಿದ್ದಾರೆ. ಏಳು ಅಡಿ ಎತ್ತರಕ್ಕೆ ಪರ್ವತ ರಚಿಸಿ, ಭಾರತದ ಭೂಪಟವನ್ನು ರೂಪಿಸಲಾಗಿದೆ. ಭೂಪಟದ ಅಡಿಭಾಗದಿಂದ ಮೇಲೆದ್ದ ತ್ರಿವರ್ಣ ಧ್ವಜ ಹಾರಾಡುವ ರೀತಿ ಮರಳು ಶಿಲ್ಪ ರಚಿಸಲಾಗಿದ್ದು ಸ್ವಾತಂತ್ರ್ಯದ 74ರ ಸಂಭ್ರಮವನ್ನು ಬಾನೆತ್ತರಕ್ಕೆ ತಲುಪಿಸುವ ರೀತಿ ತೋರುತ್ತಿದೆ.‌ 

ಯುವ ಕಲಾವಿದರು ಸೇರಿ ರಚಿಸಿದ ಈ ಕಲಾಕೃತಿ ನೋಡುಗರ ಗಮನ ಸೆಳೆದಿದೆ. ಕಲಾವಿದರಾದ ಅಜಯ್, ಧಾರೇಶ್, ಧನಂಜಯ್, ಗಿರೀಶ್, ವಿಕ್ಕಿ, ಜಗದೀಶ, ಗಣೇಶ್ ಭಟ್, ರಂಜಿತ್, ದೀಕ್ಷಾ, ತನ್ವಿತಾ ಅವರನ್ನು ಒಳಗೊಂಡ ತಂಡದ ಕೈಚಳಕದಿಂದ ಕಲಾಕೃತಿ ಮೂಡಿಬಂದಿದೆ.