ಸಂಸತ್ ಭವನಕ್ಕೆ ಹಿಂದು ರಾಷ್ಟ್ರ ಭವನ ಹೆಸರಿಡಲು ಹಿಂದು ಮಹಾಸಭಾ ಆಗ್ರಹ

06-02-21 04:55 pm       Mangalore Correspondent   ಕರಾವಳಿ

ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ಸಂಸತ್ ಭವನಕ್ಕೆ ಹಿಂದು ರಾಷ್ಟ್ರ ಭವನ ಎಂದು ಹೆಸರಿಡಬೇಕೆಂದು ಅಖಿಲ ಭಾರತ ಹಿಂದು ಮಹಾಸಭಾ ಆಗ್ರಹಿಸಿದೆ.

ಮಂಗಳೂರು, ಫೆ.6: ಭಾರತ ಹಿಂದು ರಾಷ್ಟ್ರವೆಂದು ಘೋಷಣೆಯಾಗಬೇಕು ಅನ್ನೋದು ನಮ್ಮ ಹಳೆಯ ಬೇಡಿಕೆ. ಈಗ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ ಭವನಕ್ಕೆ ಹಿಂದು ರಾಷ್ಟ್ರ ಭವನ ಎಂದು ಹೆಸರಿಡಬೇಕೆಂದು ಅಖಿಲ ಭಾರತ ಹಿಂದು ಮಹಾಸಭಾ ಆಗ್ರಹಿಸಿದೆ.

ಮಂಗಳೂರಿನ ಆರ್ಯ ಸಮಾಜದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ಹಿಂದು ಮಹಾಸಭಾ ದಕ್ಷಿಣ ಭಾರತ ವಲಯ ಕಾರ್ಯದರ್ಶಿ ಶ್ರೀ ಸ್ವಾಮಿ ದತ್ತಾತ್ರೇಯ ಸ್ವಾಮಿ ಸ್ವರೂಪನಾಥ, ಹಿಂದು ರಾಷ್ಟ್ರ ಭವನ ಎಂದು ಹೆಸರಿಡಲು ಒತ್ತಾಯಿಸಿ ಈಗಾಗ್ಲೇ ಸಹಿ ಸಂಗ್ರಹ ಆರಂಭಿಸಲಾಗಿದೆ. ಫೆ.7ರಂದು ಚಿಕ್ಕಮಗಳೂರಿನಲ್ಲಿ ರಾಜ್ಯದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಹಿಂದು ವಿರೋಧಿ ಹೇಳಿಕೆ ನೀಡುತ್ತಿದ್ದ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ವಕೀಲೆ ಮೀರಾ ರಾಘವೇಂದ್ರ ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಈ ಬಗ್ಗೆ ಬೆಂಗಳೂರಿನ ಹಲಸೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು. ಇದು ಹಿಂದುತ್ವಕ್ಕಾಗಿ ನಡೆದ ಹೋರಾಟ. ಅಂಥ ಕೇಸನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆಯಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿರುವ ಜಗದೀಶ ಅಧಿಕಾರಿ ಬಿಲ್ಲವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ. ಕೋಟಿ ಚೆನ್ನಯರು ಮತ್ತು ಬಿಲ್ಲವ ಸಮುದಾಯಕ್ಕೆ ಅವಹೇಳನ ಮಾಡಿದ ಅಧಿಕಾರಿಯನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಬಿಲ್ಲವ ಸಮುದಾಯ ಹಿಂದುತ್ವಕ್ಕಾಗಿ ಅಗಾಧ ಕೊಡುಗೆ ನೀಡಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿಂದು ಮಹಾಸಭಾ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಲ್. ಕೆ. ಸುವರ್ಣ, ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ಕಾರ್ಯದರ್ಶಿ ನವೀನ್ ಕುಮಾರ್ ಸುರತ್ಕಲ್, ದ.ಕ. ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ, ದ.ಕ ಜಿಲ್ಲಾ ಶ್ರಮಿಕ ಸಭಾ ಕಾರ್ಯದರ್ಶಿ ಪ್ರಕಾಶ್ ಭಟ್ ಉಪಸ್ಥಿತರಿದ್ದರು.