ಬಿಲ್ಲವರ ಅವಹೇಳನ ; ಕೆಲ್ಲಪುತ್ತಿಗೆ ಗರೋಡಿಗೆ ತೆರಳಿ ಕೋಟಿ ಚೆನ್ನಯರಿಗೆ ಕೈಮುಗಿದ ಅಧಿಕಾರಿ, ಬಹಿರಂಗ ಕ್ಷಮೆ ! 

09-02-21 06:49 pm       Mangaluru Correspondent   ಕರಾವಳಿ

ಕೋಟಿ ಚೆನ್ನಯರು ಮತ್ತು ಬಿಲ್ಲವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಕೊನೆಗೂ ಕೋಟಿ ಚೆನ್ನಯರಿಗೆ ಕೈಮುಗಿದಿದ್ದಾರೆ.

ಮೂಡುಬಿದ್ರೆ, ಫೆ.9: ಕೋಟಿ ಚೆನ್ನಯರು ಮತ್ತು ಬಿಲ್ಲವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಕೊನೆಗೂ ಕೋಟಿ ಚೆನ್ನಯರಿಗೆ ಕೈಮುಗಿದಿದ್ದಾರೆ. ಇಲ್ಲಿನ ಕೆಲ್ಲಪುತ್ತಿಗೆಯ ಗರೋಡಿಗೆ ತೆರಳಿ ಅಧಿಕಾರಿ ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಅಲ್ಲದೆ ಬಹಿರಂಗ ಕ್ಷಮೆ ಯಾಚನೆಯನ್ನೂ ಮಾಡಿದ್ದಾರೆ. 

ಕೆಲ್ಲಪುತ್ತಿಗೆಯ ಶ್ರೀ ಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ, ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರೋಡಿಗೆ ಆಗಮಿಸಿದ ಜಗದೀಶ್ ಅಧಿಕಾರಿ ತಪ್ಪು ಕಾಣಿಕೆ ಹಾಕಿದ್ದಾರೆ. ಅಲ್ಲದೆ ದೈವದ ಮುಂದೆ ಕ್ಷಮೆಯಾಚನೆ  ಮಾಡಿದ್ದಾರೆ. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚಿಸುತ್ತಿದ್ದೇನೆ. ಅಲ್ಲದೆ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರಿಗೂ ತನ್ನ ಹೇಳಿಕೆಯಿಂದ  ನೊಂದಿದ್ದರೆ ಕ್ಷಮೆ ಕೋರುತ್ತೇನೆ.  ತನ್ನ ಮಾತಿನಿಂದ ಉಂಟಾದ ವಿವಾದಕ್ಕೆ ಕೋಟಿ ಚೆನ್ನಯರ ಗರಡಿಯಲ್ಲಿಯೇ ನಿಂತು ಕ್ಷಮೆಯಾಚಿಸುತ್ತಿದ್ದು, ತಪ್ಪು ಕಾಣಿಕೆ ಹಾಕಿ ಎಲ್ಲ ವಿವಾದಗಳಿಗೆ ಇತಿಶ್ರೀ ಹಾಕಲು ನಿರ್ಧರಿಸಿದ್ದೇನೆ ಎಂದು ಅಧಿಕಾರಿ ಹೇಳಿದರು. 

ಜನಾರ್ದನ ಪೂಜಾರಿ ನಮಗೆಲ್ಲ ಹಿರಿಯರು, ಪೂಜ್ಯರು. ಅವರ ನಿವಾಸಕ್ಕೂ ತೆರಳಿ ಕ್ಷಮೆ ಕೋರುತ್ತೇನೆ. ಜೊತೆಗೆ ಕುದ್ರೋಳಿ ಹಾಗೂ ಗೆಜ್ಜೆಗಿರಿ ಕ್ಷೇತ್ರಕ್ಕೂ ತೆರಳಿ ತಪ್ಪು ಕಾಣಿಕೆ ಸಲ್ಲಿಸಿ, ಕ್ಷಮೆಯಾಚನೆ ಮಾಡುವುದಾಗಿ ಜಗದೀಶ್ ಅಧಿಕಾರಿ ಹೇಳಿದ್ದಾರೆ. 

ನಿನ್ನೆಯಷ್ಟೇ ಬಿಲ್ಲವ ಸಮುದಾಯದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ಜಗದೀಶ ಅಧಿಕಾರಿ ವಿರುದ್ಧ ಬಹಿರಂಗ ಸವಾಲು ಹಾಕಿದ್ದರು. ಮೂರು ದಿನದೊಳಗೆ ಗರೋಡಿಗೆ ತೆರಳಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವ ಯುವಕರು ಅಧಿಕಾರಿ ಮುಖಕ್ಕೆ ಮಸಿ ಹಾಕಲಿದ್ದಾರೆ. ಮಸಿ ಹಾಕಿದ ಯುವಕನಿಗೆ ಒಂದು ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಲೇ ಜಗದೀಶ್ ಅಧಿಕಾರಿ ಇಂದು ಮೂಡುಬಿದ್ರೆಯಲ್ಲಿ ಗರೋಡಿಗೇ ತೆರಳಿ ಬಿಲ್ಲವರಲ್ಲಿ ಕ್ಷಮೆ ಕೋರಿದ್ದಾರೆ.

Defamatory words against Koti Chennayya BJP Leader Jagadish Adhikari offers forgiveness offering at the temple in Moodbidri.