ಜಗದೀಶ ಅಧಿಕಾರಿಯನ್ನು ಬಿಜೆಪಿಯಿಂದ ಕಿತ್ತು ಹಾಕದಿದ್ದರೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ

10-02-21 01:00 pm       Mangalore Correspondent   ಕರಾವಳಿ

ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಗರೋಡಿಗೆ ತೆರಳಿ, ಕೋಟಿ ಚೆನ್ನಯರಿಗೆ ಕೈಮುಗಿದು ಬಿಲ್ಲವರ ಕ್ಷಮೆ ಯಾಚಿಸುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ತಮ್ಮ ವರಸೆ ಬದಲಿಸಿದ್ದಾರೆ.

ಮಂಗಳೂರು, ಫೆ.10: ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಗರೋಡಿಗೆ ತೆರಳಿ, ಕೋಟಿ ಚೆನ್ನಯರಿಗೆ ಕೈಮುಗಿದು ಬಿಲ್ಲವರ ಕ್ಷಮೆ ಯಾಚಿಸುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ತಮ್ಮ ವರಸೆ ಬದಲಿಸಿದ್ದಾರೆ. ಜಗದೀಶ ಅಧಿಕಾರಿಯನ್ನು ಇನ್ನು ಮೂರು ದಿನದೊಳಗೆ ಬಿಜೆಪಿಯಿಂದ ಉಚ್ಚಾಟನೆ ಮಾಡದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಬಿಲ್ಲವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೊಸ ಸವಾಲು ಮುಂದಿಟ್ಟಿದ್ದಾರೆ.

ಜಗದೀಶ ಅಧಿಕಾರಿ ನಿನ್ನೆಯಷ್ಟೇ ಮೂಡುಬಿದ್ರೆಯ ಕೆಲ್ಲಪುತ್ತಿಗೆಯ ಗರೋಡಿಗೆ ತೆರಳಿ, ಕೋಟಿ ಚೆನ್ನಯರಿಗೆ ಕೈಮುಗಿದಿದ್ದರು. ಅಲ್ಲದೆ, ಬಿಲ್ಲವರಿಗೆ ತನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ್ದರು. ಜನಾರ್ದನ ಪೂಜಾರಿಯವರ ಮನೆಗೂ ತೆರಳಿ ಕ್ಷಮೆ ಕೋರುತ್ತೇನೆ. ಕುದ್ರೋಳಿ ಮತ್ತು ಗೆಜ್ಜೆಗಿರಿ ಕ್ಷೇತ್ರಗಳಿಗೂ ತೆರಳಿ ತಪ್ಪು ಕಾಣಿಕೆ ಹಾಕುತ್ತೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಫೇಸ್ಬುಕ್ ಲೈವ್ ನಲ್ಲಿ ಮಾತನಾಡಿರುವ ಪ್ರತಿಭಾ ಕುಳಾಯಿ, ಜಗದೀಶ ಅಧಿಕಾರಿಗೆ ಈಗ ಗೊತ್ತಾಗಿರಬೇಕು, ಬಿಲ್ಲವರ ಬಲ ಏನೆಂದು. ಇನ್ನೆಂದು ಯಾರು ಕೂಡ ಬಿಲ್ಲವರ ಬಗೆಗಾಗಲೀ, ಇನ್ನೊಂದು ಜಾತಿ, ಧರ್ಮದ ಬಗ್ಗೆ ಆಗಲೀ ನಿಂದಿಸಿ ಮಾತನಾಡಬಾರದು. ಅಧಿಕಾರಿ ಗೆಜ್ಜೆಗಿರಿ ಮತ್ತು ಕುದ್ರೋಳಿ ಕ್ಷೇತ್ರಕ್ಕೂ ತೆರಳಿ ತಪ್ಪು ಕಾಣಿಕೆ ಹಾಕುವುದಾಗಿ ಹೇಳಿದ್ದಾರೆ. ಕ್ಷಮೆ ಯಾಚಿಸದಿದ್ದರೆ ಮಸಿ ಬಳಿಯುವ ಯುವಕರಿಗೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದ್ದೆ. ನಾನು ಘೋಷಣೆ ಮಾಡಿದ್ದ ಒಂದು ಲಕ್ಷ ರೂ.ವನ್ನು ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ಹಂಚುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ, ಫೇಸ್ಬುಕ್ ನಲ್ಲಿ ಎಷ್ಟೋ ಮಂದಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಬಾಯಿಗೆ ಬಂದ ರೀತಿ ಬೈದಿದ್ದಾರೆ. ನಿಮಗೆ ತಾಕತ್ತಿದ್ದರೆ, ಒರಿಜಿನಲ್ ಫೋಟೋ ಮತ್ತು ಅಕೌಂಟ್ ಇಟ್ಟುಕೊಂಡು ಚರ್ಚೆಗೆ ಬನ್ನಿ. ಆಮೇಲೆ ಬಾಯಿಗೆ ಬಂದ ರೀತಿ ಮಾತನಾಡಿ. ನೀವು ಏನೇನೋ ಬರೆದಿದ್ದೀರಿ ಅಂತ ಸೈಬರ್ ಠಾಣೆಗೆ ದೂರು ನೀಡುವುದಿಲ್ಲ. ಫೇಕ್ ಅಕೌಂಟ್ ಬದಲು ಒರಿಜಿನಲ್ ಆಗಿ ಬನ್ನಿ. ಆನಂತ್ರ ನೋಡಿಕೊಳ್ತೇನೆ ಎಂದು ಸವಾಲು ಹಾಕಿದ್ದಾರೆ.

ಇದಲ್ಲದೆ, ಬಿಜೆಪಿಯವರಿಗೆ ಈಗಾಗ್ಲೇ ಬಿಲ್ಲವರ ತಾಕತ್ತಿನ ಅರಿವಾಗಿರಬಹುದು. ಕೆಲವರು ನನ್ನನ್ನು ರಾಜಕೀಯ ಮಾಡಿದ್ರು ಅಂತ ಹೇಳಿದ್ರು. ಆದರೆ, ಇವರ್ಯಾರಿಗೂ ಈ ವಿಚಾರದ ಬಗ್ಗೆ ಓಪನ್ನಾಗಿ ಮಾತನಾಡಲು ಧೈರ್ಯ ಇರಲಿಲ್ಲ. ಈಗ ಹೇಳುತ್ತಿದ್ದೇನೆ, ಬಿಜೆಪಿಯವರು ಇನ್ನು ಮೂರು ದಿನದೊಳಗೆ ಜಗದೀಶ ಅಧಿಕಾರಿಯನ್ನು ಪಕ್ಷದಿಂದ ಕಿತ್ತು ಹಾಕಬೇಕು. ಆ ಕೆಲಸ ಮಾಡದಿದ್ದರೆ ನಾಲ್ಕನೇ ದಿನ ಬಿಲ್ಲವರನ್ನು ಒಟ್ಟುಗೂಡಿಸಿ ಬಿಜೆಪಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಬಿಲ್ಲವರ ತಾಕತ್ತು ಏನೆಂದು ತೋರಿಸುತ್ತೇವೆ. ಕೋಟಿ ಚೆನ್ನಯರ ವಂಶಜರಾಗಿರುವ ಬಿಲ್ಲವರು ಯಾರಿಗೂ ಜಗ್ಗುವವರಲ್ಲ ಎನ್ನುವುದನ್ನು ಸಾಬೀತು ಮಾಡುತ್ತೇವೆ ಎಂದು ಪ್ರತಿಭಾ ಬಿಜೆಪಿಯವರಿಗೆ ಟಾಂಗ್ ಇಟ್ಟಿದ್ದಾರೆ. 

Prathibha Kulai has warned of protest by Billavas in front of BJP office in Mangalore against Jagadish Adhikari if he won't be eliminated from BJP party for his deformation statement against Koti-Chennaya.