ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತುಳುವನ್ನೂ ಸೇರಿಸಿ ; ಟ್ವೀಟ್ ಅಭಿಯಾನಕ್ಕೆ ಜಗ್ಗೇಶ್ ಬೆಂಬಲ

16-08-20 04:49 pm       Headline Karnataka News Network   ಕರಾವಳಿ

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವ ಒತ್ತಾಯ ಹೆಚ್ಚಿರುವ ಸಂದರ್ಭದಲ್ಲಿಯೇ ಕನ್ನಡದ ನಟ ಜಗ್ಗೇಶ್ ಟ್ವೀಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು ನಾನು ಕೂಡ ತುಳು ಭಾಷಿಗರ ಒತ್ತಾಯಕ್ಕೆ ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳೂರು, ಆಗಸ್ಟ್ 16: ತುಳು ಭಾಷೆಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ರಡಿಯಲ್ಲಿ ಸೇರಿಸಲು ಒತ್ತಾಯಿಸಿ ಇಂದು ತುಳುವರು ಟ್ವೀಟ್ ಅಭಿಯಾನ ನಡೆಸಿದ್ದಾರೆ. ಜೈ ತುಳುನಾಡು ಸಂಘಟನೆ ಎಜ್ಯುಕೇಷನ್ ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಅಭಿಯಾನ ಆಯೋಜಿಸಿದ್ದು ಸಾವಿರಾರು ಜನ ಟ್ವೀಟ್ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

5ನೇ ಅಥವಾ 8ನೇ ತರಗತಿಯ ವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಸ್ಥಳೀಯ ಅಥವಾ ಮಾತೃಭಾಷೆಯೇ ಬೋಧನ ಮಾಧ್ಯಮವಾಗಿರಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಆದರೆ, ಕರಾವಳಿಯ ಲಕ್ಷಾಂತರ ಜನರ ಮಾತೃಭಾಷೆ ತುಳು ಆಗಿರುವ ಹಿನ್ನೆಲೆಯಲ್ಲಿ ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಥವಾ ತುಳುವನ್ನು ಮೂರನೇ ಐಚ್ಛಿಕ ಭಾಷೆಯಾಗಿ ಕಲಿಸಬೇಕು ಎನ್ನುವ ಹಕ್ಕೊತ್ತಾಯ ರೂಪಿಸಲಾಗಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವ ಒತ್ತಾಯ ಹೆಚ್ಚಿರುವ ಸಂದರ್ಭದಲ್ಲಿಯೇ ಈಗ ಶಿಕ್ಷಣದಲ್ಲಿಯೂ ತುಳು ಭಾಷೆಗೆ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿಬಂದಿದ್ದು ಇದಕ್ಕೆ ಕನ್ನಡಿಗರೂ ಬೆಂಬಲ ಸೂಚಿಸಿದ್ದಾರೆ. ಕನ್ನಡದ ನಟ ಜಗ್ಗೇಶ್ ಟ್ವೀಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು ನಾನು ಕೂಡ ತುಳು ಭಾಷಿಗರ ಒತ್ತಾಯಕ್ಕೆ ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾವಿರಾರು ಮಂದಿ ಈಗಾಗಲೇ ಹ್ಯಾಷ್‌ಟ್ಯಾಗ್‌ ಎಜ್ಯುಕೇಷನ್ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರದ ಕಿವಿ ತಲುಪಬಹುದೇ ಅನ್ನುವ ಕುತೂಹಲದಲ್ಲಿ ಜನರಿದ್ದಾರೆ.