ಕಡೆಗೂ ಸಿಕ್ಕಿಬಿದ್ದ ಎಟಿಎಂ ಸ್ಕಿಮ್ಮಿಂಗ್ ಎಕ್ಸ್ ಪರ್ಟ್ ! ಐಷಾರಾಮಿ ಜೀವನ, ದೇಶ ಸುತ್ತಾಟ, ಹೆಣ್ಣುಗಳಿಗೆ ಖರ್ಚು !

24-02-21 04:10 pm       Mangalore Correspondent   ಕರಾವಳಿ

ಎಟಿಎಂ ಸ್ಕಿಮ್ಮಿಂಗ್ ತಂತ್ರಜ್ಞಾನದ ಮಾಸ್ಟರ್ ಮೈಂಡ್ ಗ್ಲಾಡ್ವಿನ್ ಜಿಂಟೋ ಜಾಯ್ ಎಂಬಾತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಮಂಗಳೂರು, ಫೆ.24: ಬ್ಯಾಂಕ್ ಖಾತೆಯಿಂದ ತನ್ನಿಂತಾನೇ ಹಣ ವಿತ್ ಡ್ರಾ ಆಗಿದ್ದು ಆ ಬಗ್ಗೆ ಮೊಬೈಲ್ ಮೆಸೇಜ್ ನೋಡಿ ಆಘಾತಗೊಂಡು ಪೊಲೀಸ್ ದೂರು ನೀಡಿದ್ದು ಕೇಳಿದ್ದಿರಬಹುದು. ಪೊಲೀಸರು ಅದನ್ನು ಎಟಿಎಂ ಸ್ಕಿಮ್ಮಿಂಗ್ ಎಂದು ಸಾಗಹಾಕಿದ್ದ ಬಗ್ಗೆಯೂ ಕೆಲವರು ಫೋನ್ ಮಾಡಿ ದೂರಿಕೊಂಡಿದ್ದೂ ಆಗಿತ್ತು. ಆದರೆ, ಈ ಕೃತ್ಯ ಎಸಗಿದ್ದ ಚಾಣಾಕ್ಷ ಕಳ್ಳರನ್ನು ಮಂಗಳೂರಿನ ಸೈಬರ್ ಕ್ರೈಮ್ ಪೊಲೀಸರು ಕೊನೆಗೂ ಪತ್ತೆ ಮಾಡಿದ್ದಾರೆ. ಎಟಿಎಂ ಸ್ಕಿಮ್ಮಿಂಗ್ ತಂತ್ರಜ್ಞಾನದ ಮಾಸ್ಟರ್ ಮೈಂಡ್ ಗ್ಲಾಡ್ವಿನ್ ಜಿಂಟೋ ಜಾಯ್ ಎಂಬಾತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಕೇರಳದ ತ್ರಿಶ್ಶೂರ್ ಮೂಲದ ಗ್ಲಾಡ್ವಿನ್ ಜಿಂಟೋ ಜಾಯ್(37), ದೆಹಲಿ ಮೂಲದ ದಿನೇಶ್ ಸಿಂಗ್ ರಾವತ್(44), ಕಾಸರಗೋಡು ಮೀಪುಗುರಿಯ ಅಬ್ದುಲ್ ಮಜೀದ್(27), ಕೇರಳ ಆಲಪ್ಪುಳ ಜಿಲ್ಲೆಯ ನಿವಾಸಿ ರಾಹುಲ್ ಟಿ.ಎಸ್ (24) ಬಂಧಿತರು. ಎರಡು ದಿನಗಳ ಹಿಂದೆ ಮಂಗಳಾದೇವಿ ಬಳಿ ಎಸ್ ಬಿಐ ಎಟಿಎಂ ಹೊಕ್ಕಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದುಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ನಿಜಕ್ಕಾದರೆ, ಅದರ ಹಿಂದಿನ ಕರಾಮತ್ತೇ ಮಂಗಳೂರಿನ ಸೈಬರ್ ಕ್ರೈಂ ತಂಡದ್ದು. ಇನ್ ಸ್ಪೆಕ್ಟರ್ ಸವಿತ್ರತೇಜ ಮಾರ್ಗದರ್ಶನದಲ್ಲಿ ಸೈಬರ್ ಟೀಂ ಕಾರ್ಯಾಚರಣೆ ನಡೆಸಿತ್ತು.

ಆರೋಪಿಗಳ ಪತ್ತೆಗೆ ಪ್ರಯಾಸ ಪಟ್ಟಿದ್ದ ತಂಡ  

ಕಳೆದ ಡಿ.10ರ ಬಳಿಕ ಮಂಗಳೂರಿನ ಸೈಬರ್ ಠಾಣೆಯಲ್ಲಿ ತನ್ನಿಂತಾನೇ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗುತ್ತಿದ್ದ ಬಗ್ಗೆ  ಒಂದರ ಹಿಂದೊಂದರ ರೀತಿ ಪ್ರಕರಣಗಳು ದಾಖಲಾಗಿದ್ದವು. ಡಿಸೆಂಬರ್, ಜನವರಿಯಲ್ಲಿ ಸರದಿಯಂತೆ 22 ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನವಲ್ಲಿ ಕುಳಾಯಿ, ನಾಗುರಿ ಮತ್ತು ಮಂಗಳಾದೇವಿ ಪರಿಸರದವರೇ ಇದ್ದರು. ಈ ಬಗ್ಗೆ ಟ್ರೇಸ್ ಮಾಡಲಾರಂಭಿಸಿದ ಸೈಬರ್ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿತ್ತು. ಸ್ಕಿಮ್ಮಿಂಗ್ ಮಾಡುವ ತಂಡದ ಚಹರೆಗಳು ಎಟಿಎಂ ಕೇಂದ್ರದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬಂದು ಕ್ಯತ್ಯ ಎಸಗಿದ್ದು ಪತ್ತೆಯಾಗಿತ್ತು. ತಂಡದ ಪತ್ತೆಗಾಗಿ ಪೊಲೀಸರು ಭಾರೀ ಜಾಲ ಬೀಸಿದ್ದರು. ಆದರೆ, ಯಾವುದೇ ಸುಳಿವು ಸಿಗುತ್ತಿರಲಿಲ್ಲ.

ಸುಳಿವು ನೀಡಿದ್ದರು ಸಿಕ್ಕಿಬಿದ್ದ ಆಗಂತುಕರು !

ಇದೇ ವೇಳೆ, ಸೈಬರ್ ಠಾಣೆಯಲ್ಲಿ ಎಕ್ಸ್ ಪರ್ಟ್ ಆಗಿದ್ದ ವಿಜಯ್ ಮತ್ತಿತರ ಕೆಲವು ಹಿರಿಯ ಸಿಬಂದಿ ನಿರ್ದಿಷ್ಟ ಎಟಿಎಂ ಗಳನ್ನು ಮಾತ್ರ ತಂಡ ಟಾರ್ಗೆಟ್ ಮಾಡಿದ್ದನ್ನು ಪತ್ತೆ ಮಾಡಿದ್ರು. ಎಟಿಎಂ ಮೆಷಿನ್ನಿಗೆ ಹಣ ತುಂಬಿದ ದಿವಸವೇ ಆಗಂತುಕರು ಎಟಿಎಂ ಒಳಗೆ ಬರುವುದು ಮತ್ತು ತಮ್ಮ ಸೂಕ್ಷ್ಮ ಉಪಕರಣಗಳನ್ನು ಅದರಲ್ಲಿಡುವುದನ್ನು ಪತ್ತೆ ಮಾಡಿದ್ದಾರೆ. ಅದರಂತೆ, ಮೊನ್ನೆ ಮಂಗಳಾದೇವಿ ಬಳಿಯ ಎಸ್ ಬಿಐ ಎಟಿಎಂ ಕೇಂದ್ರಕ್ಕೆ ಆಗಂತುಕರು ಬರಬಹುದೆಂಬ ನೆಲೆಯಲ್ಲಿ ನಾರ್ಮಲ್ ಡ್ರೆಸ್ ಹಾಕ್ಕೊಂಡು ಪೊಲೀಸರು ಕಾದಿದ್ದರು. ಅಲ್ಲದೆ, ಅಲ್ಲಿಯೇ ಇರುವ ಪೆಟ್ರೋಲ್ ಪಂಪ್ ಸಿಬಂದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಮೂವರು ಸಂಶಯಿತ ವ್ಯಕ್ತಿಗಳು ಎಟಿಎಂ ಒಳಗೆ ನುಗ್ಗುತ್ತಲೇ ಪೊಲೀಸರು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಇದನ್ನರಿತ ಆರೋಪಿಗಳು ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೆಟ್ರೋಲ್ ಪಂಪ್ ಸಿಬಂದಿ ಸಹಾಯದಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಪೊಲೀಸರಿಂದ ತಪ್ಪಿಸಿ ಓಡುವಷ್ಟರಲ್ಲಿ ಒಬ್ಬಾತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ. ಆತನನ್ನು ಕಾಸರಗೋಡು ಮೂಲದ ಅಜ್ಮಲ್ ಎಂದು ಗುರುತಿಸಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತ್ರಿಶ್ಶೂರಲ್ಲಿ ಅಡಗಿಕೊಂಡಿದ್ದ ರೂವಾರಿ

ಸೈಬರ್ ಪೊಲೀಸರು ಈ ಮೊದಲೇ ಕಳ್ಳರ ತಂಡದ ಬೆನ್ನು ಬಿದ್ದಿದ್ದರೂ, ಖಚಿತ ಸಾಕ್ಷ್ಯಕ್ಕಾಗಿ ಕಾದಿದ್ದರು. ಅಲ್ಲದೆ, ಈ ಜಾಲದ ಕಿಂಗ್ ಪಿನ್ ಆಗಿರುವಾತನ ಬಂಧನಕ್ಕಾಗಿ ಬಲೆ ಬೀಸಿದ್ದರು. ಮಂಗಳಾದೇವಿ ಬಳಿ ಮೂವರು ಸಿಕ್ಕಿಬೀಳುತ್ತಿದ್ದಂತೆ, ಜಾಲದ ರೂವಾರಿ ಜಿಂಟೋ ಜಾಯ್ ಕೇರಳದ ತ್ರಿಶ್ಶೂರಿನಲ್ಲಿರುವುದನ್ನು ಕಂಡುಕೊಂಡಿದ್ದು, ನಿಗೂಢವಾಗೇ ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಸದ್ಯಕ್ಕೆ ನಾಲ್ವರನ್ನು ಮಾತ್ರ ಬಂಧಿಸಿದ್ದಾಗಿ ಪೊಲೀಸರು ತೋರಿಸಿದ್ದು, ಜಾಲದಲ್ಲಿ ಇನ್ನಷ್ಟು ಮಂದಿ ಇರುವ ಹಿನ್ನೆಲೆಯಲ್ಲಿ ಅವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಹೆಣ್ಣುಗಳಿಗೆ ಖರ್ಚು, ದುಬಾರಿ ಹೊಟೇಲಲ್ಲಿ ಮಜಾ !

ಮಂಗಳೂರಿನಲ್ಲಿ 22 ಪ್ರಕರಣ, 50ಕ್ಕೂ ಹೆಚ್ಚು ಎನ್ ಸಿಆರ್ ದಾಖಲಾಗಿದ್ದು, ಆರೋಪಿಗಳು 25ರಿಂದ 30 ಲಕ್ಷದಷ್ಟು ಹಣವನ್ನು ಲಪಟಾಯಿಸಿದ್ದಾರೆ. ಆರೋಪಿಗಳು ನಕಲಿ ಕಾರ್ಡ್ ಗಳನ್ನು ಮಾಡಿಸಿಕೊಂಡು ಮಂಗಳೂರು, ಕಾಸರಗೋಡು, ಗೋವಾ, ಬೆಂಗಳೂರು, ದೆಹಲಿ, ತ್ರಿಶ್ಶೂರ್ ಹೀಗೆ ಹಲವೆಡೆಗಳಲ್ಲಿ ಎಟಿಎಂಗಳಿಂದಲೇ ಹಣವನ್ನು ಪೀಕಿಸುತ್ತಿದ್ದರು. ಸುಲಭದಲ್ಲಿ ಸಿಗುತ್ತಿದ್ದ ಹಣವನ್ನು ಮಜಾ ಮಾಡಲು ಉಪಯೋಗಿಸುತ್ತಿದ್ದರು. ಕಾರುಗಳನ್ನು ಬಾಡಿಗೆ ಪಡೆದು ಗೋವಾಕ್ಕೆ ಹೋಗಿ ಹೆಣ್ಣುಗಳಿಗೆ ಖರ್ಚು ಮಾಡುತ್ತಿದ್ದರು. ದೊಡ್ಡ ಹೊಟೇಲ್ ಗಳಲ್ಲಿ ಉಳಿದುಕೊಂಡು ಮಜಾ ಮಾಡುವುದು, ದುಬಾರಿ ಬಟ್ಟೆ ಖರೀದಿಸಿ ಶೋಕಿ ಮಾಡುವುದಕ್ಕೆ ಬಳಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಬಂಧಿತರಿಂದ ಎಟಿಎಂ ಸ್ಕಿಮ್ಮಿಂಗ್ ಮೆಷಿನ್, ಮೊಬೈಲ್, ನಕಲಿ ಎಟಿಎಂ ಕಾರ್ಡುಗಳು, ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಂಟೋ ಜಾಯ್ ವಿರುದ್ಧ ಕೇರಳದಲ್ಲಿ ಏಳೆಂಟು ಪ್ರಕರಣಗಳು ದಾಖಲಾಗಿದ್ದು ಜೈಲಿಗೂ ಹೋಗಿ ಬಂದಿದ್ದಾನೆ. ಬಿಕಾಂ ಪದವೀಧರನಾಗಿದ್ದು, ಆಬಳಿಕ ದೆಹಲಿ, ಮುಂಬೈನಲ್ಲಿ ಲ್ಯಾಪ್ ಟಾಪ್ ಮಾರಾಟ ವ್ಯವಹಾರ ಮಾಡುತ್ತಿದ್ದ. ಇದೇ ವೇಳೆ, ಎಟಿಎಂ ಸ್ಕಿಮ್ಮಿಂಗ್ ಬಗ್ಗೆ ತಿಳ್ಕೊಂಡು ಕಳೆದ ಏಳೆಂಟು ವರ್ಷಗಳಲ್ಲಿ ಫುಲ್ ಟೈಮ್ ಆಗಿ ಅದನ್ನೇ ಜಾಬ್ ಮಾಡಿಕೊಂಡಿದ್ದ. ಎಟಿಎಂ ಸ್ಕಿಮ್ಮಿಂಗ್ ತಂತ್ರಜ್ಞಾನದಲ್ಲಿ ನಿಸ್ಸೀಮನಾಗಿದ್ದು ತಾನು ಹೋಗಿರುತ್ತಿದ್ದ ನಗರಗಳಲ್ಲಿ ತನ್ನ ಜಾಲ ಬೀಸುತ್ತಿದ್ದ. ಅದಕ್ಕಾಗಿ ಲಾಡ್ಜ್ ಇನ್ನಿತರ ಕಡೆ ಪರಿಚಯ ಆಗುತ್ತಿದ್ದ ಹುಡುಗರನ್ನು ಸಹಾಯಕ್ಕೆ ಪಡೆಯುತ್ತಿದ್ದ. ತನ್ನ ಜೊತೆ ಇಂಥದ್ದೇ ತಂಡವೆಂದು ಕಟ್ಟಿಕೊಂಡಿರಲಿಲ್ಲ. ಜಿಂಟೋ ಜಾಯ್ ನದ್ದು ವನ್ ಮ್ಯಾನ್ ಆರ್ಮಿ. ವನ್ ಮ್ಯಾನ್ ಶೋ.. ಸಹಾಯಕ್ಕೆ ಬರುತ್ತಿದ್ದವರಿಗೆ ಒಂದಿಷ್ಟು ಹಣ ಕೊಟ್ಟು ಉಳಿದೆಲ್ಲವನ್ನು ತಾನೇ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ.

ಸ್ವೈಪ್ ಇರುತ್ತಿದ್ದ ಎಟಿಎಂಗಳೇ ಟಾರ್ಗೆಟ್

ಮೇಲ್ನೋಟಕ್ಕೆ ಜಿಂಟೋ ಜಾಯ್, 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದ್ದು, 35ರಿಂದ 30 ಲಕ್ಷ ಹಣ ಎಗರಿಸಿರುವ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ನಕಲಿ ಕಾರ್ಡ್ ಗಳ ಮೂಲಕ ಆರೋಪಿಗಳು ಹೆಚ್ಚಾಗಿ ಪೋಸ್ಟ್ ಆಫೀಸ್ ಮತ್ತು ಸ್ಥಳೀಯ ಸಹಕಾರಿ ಬ್ಯಾಂಕುಗಳ ಎಟಿಎಂಗಳಿಂದ ಹಣ ಪಡೆಯುತ್ತಿದ್ದರು. ಯಾಕಂದ್ರೆ, ಅದು ಸ್ವೈಪ್ ಎಟಿಎಂ ಆಗಿದ್ದು, ಇನ್ನೂ ಆಧುನಿಕ ತಂತ್ರಜ್ಞಾನ ಅಳವಡಿಸ್ಕೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂಗಳಲ್ಲಿ ಬಹುತೇಕ ಡಿಜಿಟಲ್ ಕಾರ್ಡ್ ಸಿಸ್ಟಂ ಬಂದಿದೆ. ಒಮ್ಮೆ ಕಾರ್ಡ್ ಹಾಕಿ, ಹೋಲ್ಡ್ ಆದರೆ ಮಾತ್ರ ಹಣ ತೆಗೆಯಬಹುದು. ಸ್ಥಳೀಯ ಸೊಸೈಟಿ ಬ್ಯಾಂಕುಗಳ ಎಟಿಎಂಗಳಲ್ಲಿ ಕಾರ್ಡ್ ಹಾಕಿ, ಹೊರತೆಗೆದ ಬಳಿಕ ಪಿನ್ ಸಂಖ್ಯೆ ನಮೂದಿಸಿ ಹಣ ತೆಗೆಯಲು ಅವಕಾಶ ಇರುತ್ತದೆ. ಆರೋಪಿಗಳು ರೆಡಿ ಮಾಡುತ್ತಿದ್ದ ನಕಲಿ ಕಾರ್ಡ್ ಡಿಜಿಟಲ್ ಆಗಿರಲ್ಲ. ಡಮ್ಮಿ ಕಾರ್ಡ್ ಗಳಾಗಿದ್ದು, ಸ್ವೈಪ್ ಇರುವ ಎಟಿಎಂ ಮೆಷಿನ್ ಮತ್ತು ಮಾಲ್ ಗಳಲ್ಲಿ ಸುಲಭದಲ್ಲಿ ಸ್ಪೈಪ್ ಮಾಡಿ ಖರೀದಿ ವ್ಯವಹಾರಕ್ಕೆ ಹೆಚ್ಚು ಬಳಕೆ ಮಾಡುತ್ತಿದ್ದರು. 

ಅಂದಹಾಗೆ, ಎಟಿಎಂ ಸ್ಕಿಮ್ಮಿಂಗ್ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ಪೊಲೀಸರು ಕೇಸ್ ಪತ್ತೆ ಮಾಡಿದ್ದಾರೆ. ಮೆಟ್ರೋ ನಗರಗಳಲ್ಲಿ ಈ ರೀತಿಯ ಪ್ರಕರಣ ಕಾಮನ್ ಆಗಿದ್ದು, ಈಗ ಮಂಗಳೂರಿಗೂ ಎಕ್ಸ್ ಪರ್ಟ್ ಕಳ್ಳರು ಕನ್ನ ಹಾಕಿದ್ದಾರೆ. 


Skimming at ATMs in Mangalore Four notorious criminals arrested by City Police and Cybercrime cell. 27 cases of skimming were registered at the cybercrime police station in the city. In this connection, four accused have been arrested.