ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಿಲ್ಲವ ವೇದಿಕೆಯಿಂದ "ಬ್ರಹ್ಮಶ್ರೀ" ಪ್ರಶಸ್ತಿ

25-02-21 03:13 pm       Mangalore Correspondent   ಕರಾವಳಿ

ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಕೊಡಲಾಗುವ "ಬ್ರಹ್ಮಶ್ರೀ " ಪ್ರಶಸ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಉಳ್ಳಾಲ, ಫೆ.25: ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಕೊಡಲಾಗುವ "ಬ್ರಹ್ಮಶ್ರೀ " ಪ್ರಶಸ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದ್ದು ಫೆ.28ರಂದು ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ಪ್ರದಾನ ಮಾಡಲಾಗುವುದೆಂದು ವೇದಿಕೆಯ ಅಧ್ಯಕ್ಷ ಕೆ.ಟಿ ಸುವರ್ಣ ಹೇಳಿದರು.

ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ಕರೆದು ಅವರು ಮಾಹಿತಿ ನೀಡಿದರು. ವೇದಿಕೆಯ ನೆರಳಲ್ಲಿ ಇದೇ ಫೆ.28 ರಂದು ಬೆಳಗ್ಗೆ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ "ಮೆರುಗು 2021" (ಪ್ರತಿಭಾ ಅನಾವರಣದ ಹೊಸ್ತಿಲು) ನೃತ್ಯ ಸ್ಫರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಳಮಟ್ಟದ ಕಾರ್ಯಕರ್ತನಾಗಿ ಬೆಳೆದು ಉನ್ನತ ಸಾಧನೆಗೈದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ " ಬ್ರಹ್ಮಶ್ರೀ" ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ವೇದಿಕೆಯ ಪ್ರದಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಮಾತನಾಡಿ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಗಟ್ಟಿ ಸಮಾಜ ಭವನದಲ್ಲಿ ಎಲ್ಲಾ ಸಮಾಜ ಬಾಂಧವರಿಗೆ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಜನಪದ ಮತ್ತು ಭಕ್ತಿಗೀತೆ ನೃತ್ಯ ಸ್ಫರ್ಧೆ ನಡೆಯಲಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 14 ಗ್ರಾಮಗಳಿಂದ ಆಯ್ದ ಸ್ಫರ್ಧಿಗಳು ಸ್ಫರ್ಧೆಯಲ್ಲಿ ಭಾಗವಹಿಸುತ್ತಾರೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಫಲಕ ಮತ್ತು ನಗದು ಬಹುಮಾನ ನೀಡಲಾಗುವುದು. ಕಳೆದ ವರ್ಷ ಕೊರೊನಾ ಲಾಕ್ ಡೌನ್ ಇದ್ದ ಕಾರಣ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯ ನಡೆದಿರಲಿಲ್ಲ. ಈಗ ಮಕ್ಕಳಿಗೆ ಮತ್ತೆ ಶಾಲೆ ಪ್ರಾರಂಭವಾಗಿದ್ದು ಆದಿತ್ಯವಾರ ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆಯ ವತಿಯಿಂದ ದತ್ತು ಸ್ವೀಕರಿಸಲಾದ ವಿದ್ಯಾರ್ಥಿಗಳ ಶೈಕ್ಷಣಿಕ ಶಾಲಾ ಶುಲ್ಕವನ್ನು ವಿತರಿಸಲಾಗುವುದೆಂದರು.

ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ಕೋಶಾಧಿಕಾರಿ ಲಕ್ಷ್ಮಣ್ ಪೂಜಾರಿ, ದತ್ತು ಸಂಚಾಲಕ ಆನಂದ ಕೆ. ಅಸೈಗೋಳಿ, ಮಾಧ್ಯಮ ಕಾರ್ಯದರ್ಶಿ ಹರೀಶ್ ಅಂಬ್ಲಮೊಗರು, ಪ್ರಧಾನ ಸಂಘಟನಾ ಕಾರ್ಯದರ್ಶಿ ಗೋಪಿನಾಥ್ ಬಗಂಬಿಲ, ಕ್ರೀಡಾ ಕಾರ್ಯದರ್ಶಿ ಭಗವಾನ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

The Billva community has conferred BJP Naleen Kumar Kateel with the "Brahmashree" award.