ಬಡ ಅಜ್ಜಿಯ ಮನೆ ಸ್ಥಿತಿ ಕಂಡು ಮರುಗಿದ ಪೊಲೀಸನ ಮನಸ್ಸು!

27-02-21 02:08 pm       Mangalore Correspondent   ಕರಾವಳಿ

ಬಂಟ್ವಾಳ ಗ್ರಾಮಾಂತರ ಠಾಣೆಯ ಇಬ್ಬರು ಪೇದೆಗಳ ಮಾನವೀಯ ಕಾರ್ಯ ಜಾಲತಾಣದಲ್ಲಿ ಸದ್ದು ಮಾಡಿದೆ. ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.

ಮಂಗಳೂರು, ಫೆ.27: ಪೊಲೀಸರ ಬಗ್ಗೆ ಕೆಲವರು ಏನೇನೋ ಆರೋಪಗಳನ್ನು ಮಾಡೋದು ಕೇಳಿದ್ದೇವೆ. ಕೆಲವರ ದೌಲತ್ತಿನ ಕಾರ್ಯವೈಖರಿ, ಭ್ರಷ್ಟ ಅಧಿಕಾರಿಗಳ ಬಗೆಗಿನ ಟೀಕೆ ಇತ್ಯಾದಿ. ಆದರೆ, ಪೊಲೀಸ್ ಇಲಾಖೆಯಲ್ಲಿ ಇರೋರೆಲ್ಲಾ ಅಂಥವರೇ ಆಗಿರೋದಿಲ್ಲ. ಮನುಷ್ಯತ್ವ, ಮಾನವೀಯತೆ, ಕರುಣಾ ಹೃದಯಿ ಇರುವ ಅಧಿಕಾರಿಗಳೂ ಇದ್ದಾರೆ. ಪೊಲೀಸ್ ಸಿಬಂದಿಯೂ ಇದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯ ಇಬ್ಬರು ಪೇದೆಗಳ ಮಾನವೀಯ ಕಾರ್ಯ ಜಾಲತಾಣದಲ್ಲಿ ಸದ್ದು ಮಾಡಿದೆ. ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳು ತಾವು ಹೋದಲ್ಲಿ ಕಂಡ ಬಡ ಕುಟುಂಬದ ಬಗ್ಗೆ ಮಾನವೀಯತೆ ತೋರಿದ್ದಾರೆ. ರಸ್ತೆ ಬದಿಯಲ್ಲಿ ತೀರಾ ದುಸ್ಥಿತಿಯಲ್ಲಿದ್ದ ಮನೆಯನ್ನು ಕಂಡು ಅಲ್ಲಿಗೆ ಹೋಗಿ ವಿಚಾರಿಸಿದ್ದಾರೆ. ಆ ಇಬ್ಬರು ಪೇದೆಗಳ ಹೆಸರು ವಿಶ್ವನಾಥ್ ಪೂಜಾರಿ ಮತ್ತು ಶಿವಕುಮಾರ್.

ವಿಶು ಈ ಹಿಂದೆ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಕರ್ತವ್ಯ ಮಾಡಿದ್ದವರು. ಬಡತನ, ಬಡವರ ಕಷ್ಟ ಏನೆಂದು ಬಲ್ಲವರು. ಅವರಲ್ಲಿ ಮಾತನಾಡಿದಾಗ ತಮ್ಮ ಅನುಭವದ ಮಾತುಗಳನ್ನೇ ಹೇಳಿದ್ರು. ಬಡವರ ಕಷ್ಟದ ಬಗ್ಗೆ ಗೊತ್ತಿದೆ. ತಾನು ಕೂಡ ಬಡ ಕುಟುಂಬದಿಂದ ಬಂದವನು. ನಾವು ಗ್ರಾಮಾಂತರ ಠಾಣೆಯಲ್ಲಿ 112 ನಂಬರಿನ ಕರ್ತವ್ಯದಲ್ಲಿದ್ದು, ರಾಯಿ, ಸಿದ್ದಕಟ್ಟೆ, ಪಂಜಿಕಲ್ಲು ಹೀಗೆ ಹಳ್ಳಿಗಳ ಕಡೆಗೆ ಹೋಗುತ್ತೇವೆ. ಕಳೆದ ವಾರ ಎರಡು ಮೂರು ಬಾರಿ ಪಂಜಿಕಲ್ಲು ದಾರಿಯಲ್ಲಿ ಹೋಗಿದ್ದು ಅಲ್ಲಿನ ಮನೆಯೊಂದರ ದಯನೀಯ ಸ್ಥಿತಿ ಕಂಡು ಮನ ಕರಗಿತ್ತು. ನಿನ್ನೆ ನಮ್ಮ ಕಾರನ್ನು ನಿಲ್ಲಿಸಿ ಮನೆಯಲ್ಲಿ ಯಾರಿದ್ದಾರೆಂದು ಮಾತನಾಡಿಸಲು ಹೋಗಿದ್ದೆ. ಸಣಕಲು ಶರೀರದ ಅಜ್ಜಿ ಒಬ್ಬರೇ ಇದ್ದರು. ಮನೆಯ ಪರಿಸ್ಥಿತಿ ಕಂಡು ತುಂಬ ಗಾಬರಿಯಾಯ್ತು. ಊಟಕ್ಕೇನು ಮಾಡ್ತೀರಿ ಅಂದಾಗ, ರೇಷನ್ ಅಕ್ಕಿ ಸಿಗುತ್ತದೆ, ಊಟ ಮಾಡ್ತೇನೆ ಎಂದರು.

ಅಜ್ಜಿ ಮಾತು ಕೇಳಿ, ಮನ ಕರಗಿ ಒಂದಷ್ಟು ಜೀನಸು ಸಾಮಗ್ರಿ ಕೊಡುವ ಮನಸ್ಸಾಯ್ತು. ಅಲ್ಲೇ ಒಂದು ಅಂಗಡಿಗೆ ಹೋಗಿ ಮನೆಗೆ ಬೇಕಾಗುವ ಎಣ್ಣೆ ಇನ್ನಿತರ ಜೀನಸು ಸಾಮಾನು, ಹತ್ತು ಕೇಜಿ ಕುಚ್ಚಲಕ್ಕಿ ಹೀಗೆ ಒಟ್ಟು ಮಾಡಿಕೊಂಡು ಹೋದೆವು. ಆದರೆ, ಅಷ್ಟು ಹೊತ್ತಿಗೆ ಮನೆಯಲ್ಲಿ ಅಜ್ಜಿ ಇರಲಿಲ್ಲ. ಅಲ್ಲೇ ಪಕ್ಕದ ಮನೆಗೆ ಹೋದಾಗ, ಅಜ್ಜಿ ಅಲ್ಲಿದ್ದರು. ಮನೆಗೆ ಪೊಲೀಸರು ಬಂದಿದ್ದಾರೆಂದು ಭಯದಿಂದ ಮನೆಯನ್ನೇ ಬಿಟ್ಟು ಹೋಗಿದ್ದರು. ಬಳಿಕ ಪಕ್ಕದ ಮನೆಯವರಲ್ಲಿ ಮತ್ತು ಅಜ್ಜಿಯಲ್ಲಿ ನಾವು ಬಂದ ವಿಷಯ ಹೇಳಿ, ಜೀನಸು ಕೊಟ್ಟು ಬಂದೆವು ಅಂತ ಹೇಳಿದರು.

ಠಾಣೆಗೆ ಮರಳಿದಾಗ, ನಮ್ಮ ಅಧಿಕಾರಿ ವರ್ಗವೂ ಇದೇ ರೀತಿ ಜೀನಸು ಸಾಮಗ್ರಿ ಕೊಡುವುದಾಗಿ ಹೇಳಿದರು. ನಮಗೆ ಮನಸ್ಸು ತುಂಬಿ ಬಂತು. ಕೋವಿಡ್ ಸಂದರ್ಭದಲ್ಲಿ ನಾವು ಕೂಡ ಬಡವರ ಮನೆಗಳಿಗೆ ಹೋಗಿ ಜೀನಸು ಕೊಟ್ಟು ಸಹಾಯ ಮಾಡಿದ್ದೆವು. ಆದರೆ, ಈಗಲೂ ಕೆಲವು ಬಡವರ ಮನೆಗಳಲ್ಲಿ ಕಷ್ಟ ನಿವಾರಣೆ ಆಗಿಲ್ಲ. ಅಜ್ಜಿಯಲ್ಲಿ ಆಕೆಯ ಮಕ್ಕಳ ಬಗ್ಗೆ ವಿಚಾರಿಸಿದಾಗ, ಒಬ್ಬ ಮಗನಿದ್ದು ಹುಷಾರಿಲ್ಲ, ಮದ್ದಿಗೆ ಹೋಗಿದ್ದಾನೆಂದು ಹೇಳಿದರು. ಆ ಮಗನಿಗೂ ಮೈ ಹುಷಾರಿಲ್ವಂತೆ. ದುಡಿಯಲು ಸಾಧ್ಯವಾಗುವುದಿಲ್ವಂತೆ ಎಂದು ಆ ಮನೆಯ ಕಷ್ಟ ಹೇಳಿಕೊಂಡರು ವಿಶ್ವನಾಥ್.

ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಓಟಿನ ಸಂದರ್ಭ ಮಾತ್ರ ಬಡವರ ಮನೆಗೆ ಹೋಗುತ್ತಾರೆ. ಅದರಲ್ಲೂ ಇಂಥ ಮನೆಗಳಿಗೆ ಹೋಗುತ್ತಾರೋ ಇಲ್ಲವೋ.. ಬಡವರ ಕಷ್ಟ ನೀಗಿಸಲೆಂದು ಕಾರ್ಯಕರ್ತರು ಮುಂದಾಗುವುದು ಕಡಿಮೆ. ಆದರೆ, ಇಬ್ಬರು ಪೊಲೀಸ್ ಪೇದೆಗಳು ತಮ್ಮ ಕಷ್ಟ ನುಂಗಿಕೊಂಡು ಬಡವರ ಕಷ್ಟಕ್ಕೆ ಮಿಡಿದಿದ್ದಾರೆ. ಬಡ ಅಜ್ಜಿಯ ಮನೆಯ ಸ್ಥಿತಿ ಕಂಡು ಮರುಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇಂಥ ಮನಸ್ಸುಗಳು ಸಾವಿರವಾಗಲಿ ಎಂದು ಹಾರೈಸುವ. 

Two highway patrol police staffs lend a helping hand to elderly women by providing ration items in Bantwal, Mangalore. The video of this has gone viral on social media.