ಕುಮಾರಣ್ಣ ಹವಾಯಿ ಚಪ್ಪಲಿ ಹಾಕ್ಕೊಂಡು ರಾಮನಗರಕ್ಕೆ ಬಂದಾಗ್ಲೂ ಬಚ್ಚಾನೇ ಆಗಿದ್ದರು ; ಯೋಗಿ ತಿರುಗೇಟು

27-02-21 03:41 pm       Mangalore Correspondent   ಕರಾವಳಿ

ತನ್ನ ಬಗ್ಗೆ ರಾಜಕೀಯದಲ್ಲಿ ಬಚ್ಚಾ ಎಂದು ಟೀಕಿಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ತಿರುಗೇಟು ನೀಡಿದ್ದಾರೆ.

ಮಂಗಳೂರು, ಫೆ.27: ತನ್ನ ಬಗ್ಗೆ ರಾಜಕೀಯದಲ್ಲಿ ಬಚ್ಚಾ ಎಂದು ಟೀಕಿಸಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ತಿರುಗೇಟು ನೀಡಿದ್ದಾರೆ. ಹೌದು.. ನಾನು ರಾಜಕೀಯದಲ್ಲಿ ಬಚ್ಚಾನೇ.. ಕುಮಾರಸ್ವಾಮಿ ಹವಾಯಿ ಚಪ್ಪಲಿ ಹಾಕ್ಕೊಂಡು ರಾಮನಗರಕ್ಕೆ ಬಂದಿದ್ದಾಗಲೂ ಬಚ್ಚಾನೇ ಆಗಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಕರ್ತರ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗೀಶ್ವರ್, ಕುಮಾರಸ್ವಾಮಿ ಏನಿದ್ದರೂ ಅವಕಾಶವಾದಿ ರಾಜಕಾರಣಿ. ಮೊನ್ನೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಪಕ್ಷದ ಬಸವರಾಜ್ ಹೊರಟ್ಟಿಗೆ ಪರಿಷತ್ ಸಭಾಪತಿ ಸ್ಥಾನ ಕೊಡಿಸಿದ್ದರು. ಈಗ ಮೈಸೂರಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿದ್ದಾರೆ. ಅವರು ಯಾವ ಪಾರ್ಟಿಯಾದರೂ ಅಡ್ಜೆಸ್ಟ್ ಆಗುತ್ತಾರೆ. ಅವಕಾಶವಾದಿ ರಾಜಕಾರಣಿ ಎಂದು ಮೂದಲಿಸಿದರು.

ಕುಮಾರಸ್ವಾಮಿಗೆ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ. ಸಿಎಂ ಆಗಿದ್ದಾಗ ಉಡಾಫೆಯಾಗಿ ಮಾತನಾಡಿದ್ದರು. ಅಧಿಕಾರದಲ್ಲಿದ್ದಾಗ ಜನರ ಬಳಿ ಹೋಗಲಿಲ್ಲ. ಈಗ ಅವರಿಗೆ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದ್ದು, ದಿನಾ ಬೆಳಗ್ಗೆದ್ದು ಜನರ ಕಡೆ ಹೋಗುತ್ತಿದ್ದಾರೆ. ಕುಮಾರಸ್ವಾಮಿಯವರ ಅವಕಾಶವಾದಿ ಮನಸ್ಥಿತಿಯ ಬಗ್ಗೆ ನಮ್ಮ ಪಕ್ಷದ ವರಿಷ್ಠರಿಗೂ ಎಚ್ಚರಿಸುತ್ತಿದ್ದೇನೆ. ಜನರಿಗೂ ಎಚ್ಚರಿಸುತ್ತಿದ್ದೇನೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ತೊಂದರೆ ಆದೀತು ಎಂದು ಎಚ್ಚರಿಕೆ ನೀಡಿದರು.

ನೀವು ಇಸ್ಪೀಟ್ ಆಡಿದ ಹಣದಲ್ಲಿ ರಾಜ್ಯ ಸರಕಾರವನ್ನು ಬೀಳಿಸಿದ್ದೀರೆಂದು ಕುಮಾರಸ್ವಾಮಿ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೀಶ್ವರ್, ಇಸ್ಪೀಟ್ ಬಗ್ಗೆ ನಂಗೆ ಗೊತ್ತೇ ಇಲ್ಲ. ಇಸ್ಪೀಟ್ ಆಡಿಯೂ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿ ಸಿಂಗಾಪುರದಲ್ಲಿ ಇಸ್ಪೀಟ್ ಆಡಿದ್ದು ಗೊತ್ತು. ಅದರ ಫೋಟೋ ಬೇಕಾದರೆ ನನ್ನಲ್ಲಿ ಇವೆ, ಬಿಡುಗಡೆ ಮಾಡಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ. 

Read: ಕುಮಾರಸ್ವಾಮಿ ಜೋಕರ್ ಇದ್ದ ಹಾಗೆ ; ಸಚಿವ ಯೋಗೀಶ್ವರ್ ವ್ಯಂಗ್ಯ

Minister for Environment, Ecology and Tourism C P Yogeshwar in Mangalore alleged that former chief minister (CM) H D Kumaraswamy used to gamble in Singapore and Malaysia.