ತಲಪಾಡಿ ಗಡಿಯಲ್ಲಿ ಕಮಿಷನರ್ ಜೋಡಿಯ ರಹಸ್ಯ ಕಾರ್ಯಾಚರಣೆ ; ಸ್ಕೂಟರಿನಲ್ಲಿ ಹೋಗಿ ಅಕ್ರಮ ಮರಳು ಸಾಗಣೆ ಪತ್ತೆ , ಮೂವರು ವಶಕ್ಕೆ

27-02-21 05:33 pm       Mangalore Correspondent   ಕರಾವಳಿ

ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ.

ಮಂಗಳೂರು, ಫೆ.27: ಗಡಿಭಾಗದಲ್ಲಿ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರೋರಾತ್ರಿ ಸ್ಕೂಟರಿನಲ್ಲಿ ಸಾಮಾನ್ಯ ನಾಗರಿಕರ ರೀತಿ ತಲಪಾಡಿ ಗಡಿಗೆ ತೆರಳಿದ್ದ ಅಧಿಕಾರಿಗಳಿಬ್ಬರು ಅಲ್ಲಿನ ವಾಸ್ತವ ಸ್ಥಿತಿಯನ್ನು ಸ್ವತಃ ಕಂಡುಕೊಂಡಿದ್ದಾರೆ.

ನಿನ್ನೆ ತಡರಾತ್ರಿ ಮೂರು ಗಂಟೆ ಸುಮಾರಿಗೆ ಇಬ್ಬರು ಕೂಡ ಸ್ಕೂಟರಿನಲ್ಲಿ ತಲಪಾಡಿ ಟೋಲ್ ಗೇಟ್ ಬಳಿಗೆ ತೆರಳಿದ್ದರು. ಈ ವೇಳೆ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ನೇರವಾಗಿ ಟೋಲ್ ಗೇಟ್ ನಲ್ಲಿ ಹಾದು ಬಂದಿದೆ. ಅಡ್ಡಗಟ್ಟಿ ತಪಾಸಣೆ ನಡೆಸಿದ ಇಬ್ಬರು ಅಧಿಕಾರಿಗಳು, ಅಕ್ರಮವಾಗಿ ಮರಳು ಸಾಗಿಸುವುದನ್ನು ಪತ್ತೆ ಮಾಡಿದ್ದಾರೆ. ಟಿಪ್ಪರ್ ಲಾರಿಯ ಹಿಂಭಾಗದಲ್ಲಿ ಎರಡು ಕಾರಿನಲ್ಲಿ ಬೆಂಗಾವಲು ವಾಹನಗಳು ಕೂಡ ಇದ್ದವು.

ಮಫ್ತಿಯಲ್ಲಿದ್ದ ಕಮಿಷನರ್ ಜೋಡಿ ಲಾರಿಯನ್ನು ಅಡ್ಡಗಟ್ಟಿದಾಗ, ಲಾರಿಯಲ್ಲಿದ್ದವರು ಮತ್ತು ಬೆಂಗಾವಲು ಕಾರಿನಲ್ಲಿದ್ದವರು ಕಮಿಷನರ್ ಎಂದು ತಿಳಿಯದೆ ಜೋರು ಮಾಡಿದ್ದಾರೆ. ಕಮಿಷನರ್ ಕೂಡಲೇ ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಟಿಪ್ಪರ್ ಲಾರಿಯನ್ನು ಮತ್ತು ಅದರಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಎರಡು ಕಾರುಗಳನ್ನು ಜಪ್ತಿ ಮಾಡಲು ಹೋದ ಸಂದರ್ಭದಲ್ಲಿ ಅದರಲ್ಲಿದ್ದ ಸವಾರರು ಪೊಲೀಸರನ್ನು ದೂಡಿ ಹಾಕಿ ಓಡಿಹೋಗಿದ್ದಾರೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮಕ್ಕೆ ಟೋಲ್ ಸಿಬಂದಿಯ ಸಾಥ್

ಅಲ್ಲದೆ, ಟೋಲ್ ಗೇಟ್ ಮೂಲಕವೇ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ ನಡೆಯುತ್ತಿರುವುದಕ್ಕೆ ಅಲ್ಲಿನ ಸಿಬಂದಿ ಸಾಥ್ ನೀಡುತ್ತಿರುವುದನ್ನು ಕಮಿಷನರ್ ಪತ್ತೆ ಮಾಡಿದ್ದಾರೆ. ಹಾಗಾಗಿ ಟೋಲ್ ಸಿಬಂದಿ ವಿರುದ್ಧ ಪ್ರಕರಣ ದಾಖಲಿಸಲು ಉಳ್ಳಾಲ ಠಾಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಪೊಲೀಸರನ್ನು ದೂಡಿ, ಓಡಿಹೋದ ಕಾರು ಚಾಲಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮರಳು ಸಹಿತ ಟಿಪ್ಪರ್ ಲಾರಿಯನ್ನು ಉಳ್ಳಾಲ ಠಾಣೆಯಲ್ಲಿ ತಂದಿರಿಸಲಾಗಿದೆ.

ಈ ಬಗ್ಗೆ ಹೆಡ್ ಲೈನ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಹರಿರಾಂ ಶಂಕರ್, ಸ್ಥಳೀಯ ಪೊಲೀಸರು ಎಚ್ಚೆತ್ತುಕೊಳ್ಳಲಿ ಎಂದು ನಾವು ಈ ಕಾರ್ಯಾಚರಣೆ ಮಾಡಿದ್ದೇವೆ. ಅಲ್ಲಿ ಹೋಗಿದ್ದರಿಂದ ವಾಸ್ತವ ಸ್ಥಿತಿ ಅರಿವಿಗೆ ಬಂದಿದೆ. ಉಳ್ಳಾಲ ಪೊಲೀಸರಿಗೂ ಬಿಸಿ ಮುಟ್ಟಿಸಿದ್ದೇವೆ. ನಮ್ಮದೇನು ದೊಡ್ಡ ಕಾರ್ಯಾಚರಣೆ ಅಲ್ಲ ಎಂದರು.

ವಾರದ ಹಿಂದಷ್ಟೇ ತಲಪಾಡಿ ಗಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹಿಮ್ಮುಖ ಚಲಿಸಿ ಪಲ್ಟಿಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಪದೇ ಪದೇ ಅಪಘಾತ, ಉಳ್ಳಾಲದಿಂದ ಮರಳು ಅಕ್ರಮ ಸಾಗಾಟ ನಿರಂತರ ಆಗಿರುವ ಹಿನ್ನೆಲೆಯಲ್ಲಿ ಕಮಿಷನರ್ ಜೋಡಿ ವಾಸ್ತವ ತಿಳಿಯಲು ಸ್ಕೂಟರ್ ನಲ್ಲಿ ತಲಪಾಡಿ ಗಡಿಗೆ ತೆರಳಿದ್ದರು. ಕಮಿಷನರ್ ಜೋಡಿಯ ರಹಸ್ಯ ಕಾರ್ಯಾಚರಣೆಗೆ ಜಾಲತಾಣದಲ್ಲಿ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Mangalore Police commissioner Shashi Kumar and DCP Hariram rode a scooter to thwart a truck that was transporting sand illegally at Talapady and seize the truck.