ತೊಕ್ಕೊಟ್ಟಲ್ಲಿ ಶಿಕ್ಷಣ ಸಚಿವರ ಆದೇಶಕ್ಕೆ ಬೆಲೆಯಿಲ್ಲ ! ನಿಯಮ ಉಲ್ಲಂಘಿಸಿ LKG, UKG ತರಗತಿ ಆರಂಭಿಸಿದ ಖಾಸಗಿ ಶಾಲೆ !!

02-03-21 05:17 pm       Mangalore Correspondent   ಕರಾವಳಿ

ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ತರಗತಿಗಳನ್ನು ಆರಂಭಿಸಿರುವ ವಿಚಾರ ಬೆಳಕಿಗೆ ಬಂದಿದೆ. 

ಉಳ್ಳಾಲ, ಮಾ.2 : ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಸಚಿವರ ಆದೇಶವನ್ನೇ ಧಿಕ್ಕರಿಸಿ ಮತ್ತು ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ LKG, UKG ಮತ್ತು ನರ್ಸರಿ ತರಗತಿಗಳನ್ನು ಆರಂಭಿಸಿರುವ ವಿಚಾರ ಬೆಳಕಿಗೆ ಬಂದಿದೆ. 

ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ತಿಂಗಳಿಂದಲೇ LKG, UKG ಮತ್ತು ನರ್ಸರಿ  ತರಗತಿಗಳನ್ನು ಆರಂಭಿಸಿರುವ ಬಗ್ಗೆ ಮಾಹಿತಿಗಳಿದ್ದವು. ಈ ಬಗ್ಗೆ ರಿಯಾಲ್ಟಿಕ್ ಚೆಕ್ ಮಾಡಿದಾಗ, ಶಾಲೆಯಲ್ಲಿ ಸಣ್ಣ ಮಕ್ಕಳಿಗೆ ತರಗತಿ ಆರಂಭಿಸಿದ್ದು ಕಂಡುಬಂದಿದೆ. 

ಕೋವಿಡ್ ಹಿನ್ನಲೆಯಲ್ಲಿ ಆರನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಶಾಲೆ ಆರಂಭಿಸಲು ಕರ್ನಾಟಕ ಸರಕಾರ ಆದೇಶ ಮಾಡಲಾಗಿತ್ತು. ಅದರಂತೆ, ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಮೇಲಿನ ಮಕ್ಕಳಿಗೆ ತರಗತಿಯನ್ನು 50 ಶೇ. ಹಾಜರಾತಿಯಲ್ಲಿ ಮಾಡಲಾಗುತ್ತಿದೆ. ಸರಕಾರದ ಸೂಚನೆಯಿದ್ದರೂ, ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ನಿಯಮಗಳನ್ನು ಗಾಳಿಗೆ ತೂರಿ, ಎಲ್ಕೆಜಿ ಮಕ್ಕಳಿಗೂ ತರಗತಿ ಆರಂಭಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ  ಪೋಷಕರಲ್ಲಿ ಪ್ರಶ್ನೆ ಮಾಡಿದಾಗ, ಶುಲ್ಕ ಕಟ್ಟಿಸಿದ್ದಾರೆ ಮತ್ತು ತರಗತಿಗೆ ಬರಲು ಹೇಳಿದ್ದಾರೆ ಎಂದು ಹೇಳಿದ್ದಾರೆ. 

ಸರಕಾರದ ನಿಯಮ ಉಲ್ಲಂಘಿಸಿ, ಸೈಂಟ್ ಸೆಬಾಸ್ಟಿಯನ್ ಶಾಲೆ ಎಳೆಯ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ಯಾ ಅನ್ನುವ ಮಾತು ಸ್ಥಳೀಯರಿಂದ ಕೇಳಿಬಂದಿದೆ. ಸೆಬಾಸ್ಟಿಯನ್ ಶಾಲಾಡಳಿತವು LKG, UKG, ನರ್ಸರಿ ಮಕ್ಕಳಿಗೆ ಶಾಲೆ ಆರಂಭಿಸಿದ್ದರೂ, ಸಮವಸ್ತ್ರ ಹಾಕದೆ ಶಾಲೆಗೆ ತಂದು ಬಿಡುವ ವ್ಯವಸ್ಥೆ ಕಂಡುಬಂದಿದೆ. ‌

ಒಂದ್ಕಡೆ ಕೋವಿಡ್ ಪ್ರಕರಣ ಕಡಿಮೆಯಾಗಿದ್ದರೂ, ಇನ್ನೊಂದ್ಕಡೆ ಕೇರಳದ ಗಡಿಭಾಗ ಆಗಿರುವುದರಿಂದ ಕಟ್ಟುನಿಟ್ಟನ್ನು ನಿಯಮಗಳನ್ನು ಜಿಲ್ಲಾಡಳಿತ ಜಾರಿ ಮಾಡಿದೆ. ಹೀಗಿದ್ದರೂ, ತೊಕ್ಕೊಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರಕಾರದ ನಿಯಮ ಉಲ್ಲಂಘಿಸಿ ಸಣ್ಣ ಮಕ್ಕಳ ತರಗತಿ ಆರಂಭಿಸಿದ್ದು ಎಷ್ಟು ಸರಿ ಎನ್ನುವ ಭಾವನೆ ಸ್ಥಳೀಯರಲ್ಲಿದೆ. 

ಪುಟ್ಟ ಮಕ್ಕಳಿಗೆ ಈಗ ಸಮವಸ್ತ್ರ ರಹಿತವಾಗಿ ಸೆಬೆಸ್ಟಿಯನ್ ಶಾಲೆಯಲ್ಲಿ ಮಧ್ಯಾಹ್ನದ ವರೆಗೆ ತರಗತಿ ನಡೆಸಲಾಗುತ್ತಿದೆ. ಕೆಲ ಪೋಷಕರಲ್ಲಿ ಮಕ್ಕಳ ಪೂರ್ತಿ ಶುಲ್ಕವನ್ನು ಈಗಾಗಲೇ ಪೀಕಿಸಿದ್ದಾರೆ ಎನ್ನುವುದು ಹೆಡ್ ಲೈನ್ ಕರ್ನಾಟಕ ನಡೆಸಿದ ರಿಯಾಲಿಟಿ ಚೆಕ್ಕಲ್ಲಿ ತಿಳಿದುಬಂದಿದೆ‌. 

ಗಮನಕ್ಕೆ ಬಂದಿಲ್ಲ ; ಶಿಕ್ಷಣಾಧಿಕಾರಿ 

ಈ ಬಗ್ಗೆ ದ.ಕ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಅವರಲ್ಲಿ ಕೇಳಿದಾಗ, ನನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ. ಆರನೇ ತರಗತಿ ಕೆಳಗಿನ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಸರಕಾರದ ಅನುಮತಿ ಇಲ್ಲ. ಆದುದರಿಂದ ನಿಯಮ ಉಲ್ಲಂಘಿಸಿರುವ ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗೆ ನೋಟೀಸು ಜಾರಿ ಮಾಡುವುದಾಗಿ ಹೇಳಿದ್ದಾರೆ.

Video: 

Amid school closed due to covid 19 virus St Sebastian School in Thokottu has re opened its classes for LKG and UKG without permission violating the government norms.