ಬೃಹತ್ ಮಾನವ ಸರಪಳಿ ; ಅರ್ಧಕ್ಕೆ ಬಿಡುತ್ತಿದ್ದ ಬಸ್ ಗಳನ್ನ ತಲಪಾಡಿ ಟೋಲ್ ದಾಟಿಸಿದ ನಾಗರಿಕರು !

03-03-21 01:18 pm       Mangalore Correspondent   ಕರಾವಳಿ

ತಲಪಾಡಿ ಗಡಿಯಲ್ಲಿ ಅರ್ಧದಲ್ಲೇ ಇಳಿಸಿ ಹೋಗುತ್ತಿದ್ದ ಖಾಸಗಿ ಬಸ್ಸುಗಳ ವರ್ತನೆ ಮತ್ತು ಟೋಲ್ ಸಿಬ್ಬಂದಿಗಳ ಉದ್ಧಟತನದ ವಿರುದ್ಧ ಪ್ರತಿಭಟನೆ ನಡೆಯಿತ್ತು.

ಉಳ್ಳಾಲ, ಮಾ.3; ತಲಪಾಡಿ ಗಡಿಯಲ್ಲಿ ಟೋಲ್ ಗೇಟ್ ದಾಟದೆ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗುತ್ತಿದ್ದ ಖಾಸಗಿ ಬಸ್ಸುಗಳ ವರ್ತನೆ ಮತ್ತು ಟೋಲ್ ಸಿಬ್ಬಂದಿಗಳ ಉದ್ಧಟತನದ ವಿರುದ್ಧ ಸ್ಥಳೀಯರು ಬೃಹತ್ ಮಾನವ ಸರಪಳಿಯ ಮೂಲಕ ಪ್ರತಿಭಟಿಸಿ, ಖಾಸಗಿ ಬಸ್ಸುಗಳನ್ನು ಟೋಲ್ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮಂಗಳೂರು- ತಲಪಾಡಿ ನಡುವೆ ಸಂಚರಿಸುವ 35 ಖಾಸಗಿ ಬಸ್ಸುಗಳಲ್ಲಿ ನಾಲ್ಕು ಬಸ್ಸುಗಳು ಮಾತ್ರ ಸುಂಕ ಕಟ್ಟಿ  ಟೋಲ್ ದಾಟಿ ತಲಪಾಡಿ ಮುಖ್ಯ ಬಸ್ಸು ನಿಲ್ದಾಣಕ್ಕೆ ತೆರಳುತ್ತಿದ್ದರೆ, ಉಳಿದ 31 ಬಸ್ಸುಗಳು ಟೋಲ್ ಕಟ್ಟದೆ  ಪ್ರಯಾಣಿಕರನ್ನ ಅರ್ಧದಲ್ಲೇ ಇಳಿಸಿ ಹೋಗುತ್ತಿದ್ದವು. ಇದರಿಂದ ಗಡಿ ಪ್ರದೇಶದ ಬಸ್ ಪ್ರಯಾಣಿಕರು ಕಳೆದ ಒಂದು ವರುಷದಿಂದ ನಿರಂತರ ಕಿರಿಕಿರಿ ಅನಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಪ್ರಾಧಿಕಾರ ಮತ್ತು ಬಸ್ ಮಾಲಕರ ವಿರುದ್ಧ ಇಂದು ಸ್ಥಳೀಯ ನಾಗರಿಕರು ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ್ದು ಇದರ ಪರಿಣಾಮ ಖಾಸಗಿ ಬಸ್ಸುಗಳು ಟೋಲ್ ಗೇಟ್ ದಾಟಿ ತಲಪಾಡಿ ಮುಖ್ಯ ಬಸ್ಸು ತಂಗುದಾಣಕ್ಕೆ ತೆರಳಿವೆ.

ಉಳ್ಳಾಲ ಪಿ.ಐ ನೇತೃತ್ವದಲ್ಲಿ ಸಂಧಾನ  

ತಲಪಾಡಿ ಪ್ರದೇಶದ ನಾಗರಿಕರೆಲ್ಲ ಒಟ್ಟುಗೂಡಿ ಮಾನವ ಸರಪಳಿ ನಿರ್ಮಿಸಿ ಖಾಸಗಿ ಬಸ್ಸುಗಳನ್ನು ಅರ್ಧಕ್ಕೆ ನಿಲ್ಲಿಸಲು ಬಿಡದೆ ಟೋಲ್ ದಾಟಿ ಹೋಗುವಂತೆ ಒತ್ತಾಯಿಸಿದರು. ಟೋಲ್ ಸಿಬ್ಬಂದಿಗಳು ಬಸ್ಸುಗಳಿಗೆ ಟೋಲ್ ಕಟ್ಟುವಂತೆ ಪಟ್ಟು ಹಿಡಿದ ಪರಿಣಾಮ ಅನೇಕ ಖಾಸಗಿ ಬಸ್ಸುಗಳು ಟೋಲ್ ನಲ್ಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು. ಇದರಿಂದ ಬಸ್ಸಿನಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಸಮಸ್ಯೆ ಅನುಭವಿಸಿದರು. ಮಧ್ಯ ಪ್ರವೇಶಿಸಿದ ಉಳ್ಳಾಲ ಪಿ.ಐ ಸಂದೀಪ್ ಅವರು, ಟೋಲ್ ಸಿಬಂದಿಯಲ್ಲಿ ಮಾತುಕತೆ ನಡೆಸಿ ಇಂದಿನ ಮಟ್ಟಿಗೆ ಬಸ್ಸುಗಳನ್ನು ಶುಲ್ಕ ಖರೀದಿಸದೆ ಟೋಲ್ ದಾಟುವಂತೆ ಅವಕಾಶ ಕಲ್ಪಿಸಿದರು. ನಾಳೆ ಮತ್ತೆ ಟೋಲ್ ಅಧಿಕಾರಿಗಳು ಮತ್ತು ಬಸ್ಸು ಮಾಲಕರ ನಡುವೆ ಸಂಧಾನ ಸಭೆ ನಡೆಯಲಿದೆ. 

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಹಿರಿಯ ಮುಖಂಡ ವಿನಯ್ ನಾಯ್ಕ್ ತಲಪಾಡಿ ಮಾತನಾಡಿ ದೋಣಿಗೆ ಸುಂಕ ಕಟ್ಟಿ ನದಿಯಲ್ಲಿ ಈಜಿ ದಡ ಸೇರುವ ಪರಿಸ್ಥಿತಿ ಇಂದು ತಲಪಾಡಿ ನಾಗರಿಕರಿಗೆ ಬಂದಿದೆ. ಖಾಸಗಿ  ಬಸ್ಸಿನವರು ಪ್ರಯಾಣಿಕರಲ್ಲಿ ಟೋಲಿನ ನೆಪವೊಡ್ಡಿ ದುಪ್ಪಟ್ಟು ಟಿಕೆಟ್ ದರ ಪೀಕಿಸುತ್ತಿದ್ದಾರೆ. ಆದರೆ ಪ್ರಯಾಣಿಕರನ್ನ ಅರ್ಧದಲ್ಲೇ ಇಳಿಸಿ ನಿತ್ಯವೂ ಕಷ್ಟ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವುದು ನಮ್ಮ ದೌರ್ಬಲ್ಯ ಎಣಿಸಬೇಡಿ, ನಮಗೆ ಮುಂದೆ ಈ ವ್ಯವಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲೂ ಗೊತ್ತಿದೆ ಎಂದರು.

ತೆರಿಗೆ ಕಟ್ಟದ ಟೋಲ್ ಪ್ಲಾಝಾ 

ತಾಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ ವಾಹನ ಸವಾರರಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಿರುವ ಟೋಲ್ ಪ್ರಾಧಿಕಾರ ಮಾತ್ರ ಸ್ಥಳೀಯ ತಲಪಾಡಿ ಪಂಚಾಯತ್ ಗೆ ತೆರಿಗೆ ಕಟ್ಟದೆ ವಂಚಿಸಿದೆ ಎಂದರು.

ಬಸ್ಸು ಮಾಲಕರಾದ ಕರೀಂ ಮಾತನಾಡಿ, 31 ಬಸ್ಸುಗಳ ಮಾಲಕರು ತಲಾ ಒಂದು ಬಸ್ಸಿಗೆ ತಿಂಗಳಿಗೆ 7,500 ರೂಪಾಯಿ ಪ್ರಕಾರ ತಿಂಗಳಿಗೆ ಎರಡು ಲಕ್ಷ ರೂಪಾಯಿ ಟೋಲ್ ಸುಂಕ ಕಟ್ಟಲು ತಯಾರಿದ್ದು ಇದಕ್ಕೆ ಟೋಲ್ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ನಾಳೆ ಟೋಲ್ ಅಧಿಕಾರಿಗಳು ಮತ್ತು ಬಸ್ಸು ಮಾಲಕರ ನಡುವೆ ಮಾತುಕತೆ ನಡೆಯಲಿದೆ. 

ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗರೆ, ಗ್ರಾ.ಪಂ ಸದಸ್ಯರಾದ ವೈಭವ್ ಶೆಟ್ಟಿ, ಫ್ಲೇವಿ ಡಿ ಸೋಜಾ ,ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ತಲಪಾಡಿ, ಸ್ಥಳೀಯ ಮುಖಂಡರಾದ ವಿನ್ನು ಶೆಟ್ಟಿ, ಗೋಪಾಲ್ ತಚ್ಚಣಿ, ವಾಣಿ ಪೂಜಾರಿ,ಸಂಘಟನೆ ಮುಖಂಡರಾದ ಅನಿಲ್ ದಾಸ್, ಸಿದ್ಧೀಕ್ ತಲಪಾಡಿ ಉಪಸ್ಥಿತರಿದ್ದರು.

Issue from Bus staffs and Talapady Toll staffs residents organise a different Man chain Protest to reach people over Kerala border.