ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ವಿದ್ಯುತ್  ಶಾಕ್ ; ನಿರ್ಲಕ್ಷ್ಯಕ್ಕೆ ಬಾಲಕ ದುರಂತ ಸಾವು ! 

08-03-21 06:09 pm       Mangalore Correspondent   ಕರಾವಳಿ

ವಿದ್ಯುತ್ ಶಾಕ್ ತಗುಲಿ 21 ವರ್ಷದ ಹುಡುಗ ನಿಂತಲ್ಲೇ ದಾರುಣ ಸಾವು ಕಂಡ ಘಟನೆ ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ನಡೆದಿದೆ.

ಮಂಗಳೂರು, ಮಾ.8: ವಿದ್ಯುತ್ ಶಾಕ್ ತಗುಲಿ 21 ವರ್ಷದ ಹುಡುಗ ನಿಂತಲ್ಲೇ ದಾರುಣ ಸಾವು ಕಂಡ ಘಟನೆ ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನಲ್ಲಿ ನಡೆದಿದೆ. ವೆನ್ಲಾಕ್ ಆಸ್ಪತ್ರೆಯ ಹಿಂಭಾಗದ ಶವಾಗಾರದ ಬಳಿಯಿರುವ ಕ್ಯಾಂಟೀನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಮೃತ ಬಾಲಕನನ್ನು ಕಂಕನಾಡಿ ನಿವಾಸಿ ಅನೀಶ್ (21) ಎಂದು ಗುರುತಿಸಲಾಗಿದೆ. 

ಅನೀಶ್ ಕದ್ರಿ ಕೆಪಿಟಿಯ ಪಾಲಿಟೆಕ್ನಿಕ್ ನಲ್ಲಿ ಹಗಲು ಹೊತ್ತಿನಲ್ಲಿ ಕಲಿಯುತ್ತಿದ್ದು, ಸಂಜೆಯಿಂದ ರಾತ್ರಿ ವರೆಗೆ ವೆನ್ಲಾಕ್ ಕ್ಯಾಂಟೀನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕೆಲಸ ಮಾಡುತ್ತಿದ್ದು, ಕೊನೆಗೆ ನೀರು ಹಾಕಿ ನೆಲವನ್ನು ಸ್ವಚ್ಛಗೊಳಿಸುತ್ತಿದ್ದ. ಈ ವೇಳೆ, ಶಾಕ್ ಆಗಿದ್ದು ಶಾಕ್ ತಗುಲಿ ನೆಲಕ್ಕೆ ಉರುಳುವುದು ಕ್ಯಾಂಟೀನ್ ಸಿಸಿಟಿವಿಯಲ್ಲಿ ದಾಖಲಾಗಿದೆ. 


ಒಮ್ಮೆಗೆ ಡ್ರಾವರ್ ಇನ್ನಿತರ ಭಾಗಗಳು ಶಾಕ್ ಆಗುವುದು ಹುಡುಗನ ಅರಿವಿಗೆ ಬಂದಿದೆ. ಆದರೆ, ಅದೇ ವೇಳೆಗೆ ಕಸ್ಟಮರ್ ಬಂದಿದ್ದು, ಅವರಿಗೆ ಚಹಾ ಕೊಟ್ಟಿದ್ದಾನೆ. ಅಲ್ಲದೆ, ನೆಲವನ್ನು ಕ್ಲೀನ್ ಮಾಡಲೆಂದು ನೀರು ಹಾಕುತ್ತಿದ್ದ. ಗ್ರಾಹಕರು ಹಣ ಕೊಟ್ಟಿದ್ದನ್ನು ತೆಗೆದುಕೊಂಡು ಡ್ರಾವರ್ ಒಳಗೆ ಹಾಕುತ್ತಿದ್ದಂತೆ ಹುಡುಗನನ್ನು ಹಿಡಿದುಕೊಂಡಿದ್ದು ನೆಲದಲ್ಲಿ ನೀರು ಇದ್ದುದರಿಂದ ನಿಂತಲ್ಲೇ ಶಾಕ್ ಆಗಿ ಕುಸಿದು ಬಿದ್ದಿದ್ದಾನೆ. ಹುಡುಗ ನಿಂತಲ್ಲೇ ಕುಸಿದು ಬೀಳುತ್ತಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಯಾಂಟೀನ್ ಮಾಲಕನ ವಿರುದ್ಧ ಆಕ್ರೋಶ ಕೇಳಿಬಂದಿದೆ. 

ಅತ್ತಾವರದ ಪ್ರಶಾಂತ್ ಎಂಬವರು ಕ್ಯಾಂಟೀನ್ ಗುತ್ತಿಗೆ ಪಡೆದು ನಡೆಸುತ್ತಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾಲಕನ ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರ ಬಳಿ ಕೇಳಿದರೆ, ತಮಗೂ ಕ್ಯಾಂಟೀನಿಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. 

ಪೊಲೀಸರಲ್ಲಿ ಕೇಳಿದಾಗ, ಕ್ಯಾಂಟೀನ್ ಒಳಗಿನ ಅವ್ಯವಸ್ಥೆಯನ್ನು ಹೇಳಿದ್ದಾರೆ. ಒಂದೇ ಭಾಗದಲ್ಲಿ ಫ್ರಿಜ್, ಸಿಸಿಟಿವಿ, ಹೀಟ್ ಬಾಕ್ಸ್ ಹೀಗೆ ಎಲ್ಲವನ್ನೂ ಜೋಡಿಸಲಾಗಿತ್ತು. ಇದರ ವಿದ್ಯುತ್ ವಯರ್ ಗಳು ಹರಡಿಕೊಂಡಿದ್ದು ಕಂಡುಬಂದಿದೆ. ಇದರಲ್ಲೇ ಕರೆಂಟ್ ಲೀಕ್ ಆಗಿ, ಹುಡುಗನ ಸಾವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. 

ಹುಡುಗನ ಹೆತ್ತವರು ಬಡವರಾಗಿದ್ದು, ಮಗನ ಸಾವಿಗೆ ವೆನ್ಲಾಕ್ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣವೆಂದು ಪೊಲೀಸ್ ಠಾಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಡುಗನ ಮನೆಯವರನ್ನು ಆಧರಿಸುವುದಕ್ಕಾಗಿ ಹಗಲು ಶಾಲೆಗೆ ಹೋಗುತ್ತಾ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಿದ್ದ. ಬಡಪಾಯಿ ಹುಡುಗ ಯಾರದೋ ನಿರ್ಲಕ್ಷ್ಯಕ್ಕೆ ಜೀವಂತ ಸಾವು ಕಂಡಿದ್ದು ಪೊಲೀಸರನ್ನೂ ಮನ ನೋಯಿಸುವಂತಾಗಿದೆ. ಆರು ಜಿಲ್ಲೆಗಳ ವ್ಯಾಪ್ತಿಯ ಬೃಹತ್ ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಸರಿಯಾದ ವ್ಯವಸ್ಥೆ ಮಾಡದಿರುವುದು ಆಸ್ಪತ್ರೆಯ ನಿರ್ಲಕ್ಷ್ಯವೂ ಆಗುತ್ತದೆ ಎಂಬ ಮಾತು ಕೇಳಿಬಂದಿದೆ. 

A 20-year-old youth worker from Mangalore died after he came in contact with electricty and was electrocuted at a cafe in Wenlock Hospital on Monday March 8. The victim of the incident was Aneesh Suvarna (20)