ಕೇರೆ ಹಾವನ್ನು ಅಟ್ಟಿಸಿ ಬಂದು ಬಲೆಯಲ್ಲಿ ಸಿಕ್ಕಿಬಿದ್ದ ಕಾಳಿಂಗ ಸರ್ಪ

10-03-21 10:50 am       Mangalore Correspondent   ಕರಾವಳಿ

ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿದ ಘಟನೆ ಸುಳ್ಯ ಸಮೀಪದ ಮರ್ಕಂಜದಲ್ಲಿ ನಡೆದಿದೆ.

ಸುಳ್ಯ, ಮಾ.10 : ಕೇರೆ ಹಾವನ್ನು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿದ ಘಟನೆ ಸುಳ್ಯ ಸಮೀಪದ ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಆಕಿರೆಕಾಡು ಎಂಬಲ್ಲಿ ಸ್ಥಳೀಯರೊಬ್ಬರು ಬಾಳೆಗೊನೆಯ ರಕ್ಷಣೆಗಾಗಿ ಮೀನು ಹಿಡಿಯುವ ಬಲೆಯನ್ನು ಅಳವಡಿಸಿದ್ದರು. ಈ ವೇಳೆ ಜೀವ ರಕ್ಷಣೆಯೊಂದಿಗೆ ಓಡುತ್ತಿದ್ದ ಕೇರೆ ಹಾವು ಮತ್ತು ಬೆನ್ನಟ್ಟಿ ಬಂದ ಕಾಳಿಂಗ ಸರ್ಪ ಎರಡೂ ಒಂದೇ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದವು.

ತಕ್ಷಣ ಸ್ಥಳೀಯರು ಈ ಕುರಿತಂತೆ ಅರಂತೋಡು ಗ್ರಾಪಂ ಸದಸ್ಯ ಹಾಗೂ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಎಂಬವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಬಲೆಯನ್ನು ಕತ್ತರಿಸಿ ಎರಡು ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

A huge 12 feet King Cobra Snake was caught in the net while Fishing in Sullia, Dakshina Kannada.