ಪುರಾತನ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ ಪತ್ತೆ ! ನಿಜವಾದ ದೈವದ ನುಡಿ !!

10-03-21 06:10 pm       Mangalore Correspondent   ಕರಾವಳಿ

ಪುರಾತನ ಬಾವಿಯೊಂದರಲ್ಲಿ ಶೋಧ ನಡೆಸಿದಾಗ 300 ವರ್ಷಗಳ ಹಿಂದಿನ ದೇವರ ಮೂರ್ತಿ ಪತ್ತೆಯಾದ ಘಟನೆ ಮೂಡಾಯಿಗುತ್ತಿನಲ್ಲಿ ನಡೆದಿದೆ.

ಮಂಗಳೂರು, ಮಾ.10: ದೈವದರ್ಶನದಲ್ಲಿ ಹೇಳಿದಂತೆ ಪುರಾತನ ಬಾವಿಯೊಂದರಲ್ಲಿ ಶೋಧ ನಡೆಸಿದಾಗ 300 ವರ್ಷಗಳ ಹಿಂದಿನ ದೇವರ ಮೂರ್ತಿ ಪತ್ತೆಯಾದ ಘಟನೆ ಕಿನ್ನಿಗೋಳಿಯ ಬಳ್ಕುಂಜೆ ಸಮೀಪದ ಮೂಡಾಯಿಗುತ್ತಿನಲ್ಲಿ ನಡೆದಿದೆ.

ಬಳ್ಕುಂಜೆ ಮೂಡಾಯಿಗುತ್ತಿನ ಕುಟುಂಬಸ್ಥರಿಗೆ ಸೇರಿದ ಜಮೀನಿನಲ್ಲಿ ಮುಚ್ಚಿ ಹೋಗಿದ್ದ ಬಾವಿಯಲ್ಲಿ ದೈವದ ಮೂರ್ತಿ ಮತ್ತು ಪೂಜಾ ಪರಿಕರಗಳು ಪತ್ತೆಯಾಗಿವೆ. ಈ ಜಾಗದಲ್ಲಿ ಹಿಂದೆ ಮೂಡಾಯಿಗುತ್ತಿನ ಕುಟುಂಬಸ್ಥರು ದೈವಗಳ ಆರಾಧನೆ‌ ನಡೆಸುತ್ತಿದ್ದರು. ಕಾಲಕ್ರಮೇಣ ಈ ಜಮೀನು ಪರರ ಪಾಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕುಟುಂಬಸ್ಥರು ತಮ್ಮ ಮೂಲ ಜಾಗವನ್ನು ಖರೀದಿಸಿ, ದೇವರ ಆರಾಧನೆಗೆಂದು ದೇವಸ್ಥಾನ ಕಟ್ಟಿದ್ದರು. 

ಇತ್ತೀಚೆಗೆ ದೈವದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ "ಮುಚ್ಚಿ ಹೋದ ಹಳೆಯ ಬಾವಿಯನ್ನು ಮತ್ತೆ ತೋಡಬೇಕು. ಆಗ 300 ವರ್ಷಗಳ ಹಳೆಯ ದೈವದ ಮೂರ್ತಿ ಮತ್ತು ಪೂಜಾ ಪರಿಕರ ಸಿಗಲಿವೆ ಎಂದು ದೈವ ನುಡಿದಿತ್ತು. ನಿರಂತರ ಕಷ್ಟ ಎದುರಿಸುತ್ತಿದ್ದ ಹಿನ್ನೆಲೆ ದೈವದ ಮೊರೆ ಹೋಗಿದ್ದಾಗ ಕುಟುಂಬಸ್ಥರು ದೈವ ದರ್ಶನ ಇಟ್ಟಿದ್ದರು. 

ಅದರಂತೆ, ಮನೆಯವರು ಆ ಜಾಗದಲ್ಲಿ ಬಾವಿ ತೋಡಿದ್ದು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದ ಬಾವಿ ಪತ್ತೆಯಾಗಿದೆ. ಅಲ್ಲದೆ, ಬಾವಿ ಒಳಗೆ ಹಳೆಯದಾದ ಕಂಚಿನ ದೈವದ ಮೂರ್ತಿ, ಆಭರಣ, ಕತ್ತಿಗಳು ಪತ್ತೆಯಾಗಿವೆ.

300-year-old idol found inside well in kinnigoli Mangalore.