ಕುಂದಾಪುರ: ಕೊರೊನಾ ಶವ ಅದಲು ಬದಲು ; ಆರೋಗ್ಯ ಅಧಿಕಾರಿಗಳ ಎಡವಟ್ಟಿಗೆ ಆಕ್ರೋಶ ! 

23-08-20 08:42 pm       Udupi Reporter   ಕರಾವಳಿ

ಕೊರೊನಾ ಹೆಸರಲ್ಲಿ ದಂಧೆ ನಡೆಯುತ್ತಿರುವ ಆರೋಪಗಳ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಮೃತ ದೇಹ ಅದಲು ಬದಲು ನೀಡಿದ್ದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉಡುಪಿ, ಆಗಸ್ಟ್ 23: ಕೊರೊನಾ ಹೆಸರಲ್ಲಿ ದಂಧೆ ನಡೆಯುತ್ತಿರುವ ಆರೋಪಗಳ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಕೋವಿಡ್ ಪಾಸಿಟಿವ್ ಆಗಿ ಮೃತಪಟ್ಟ ಶವದ ಬದಲು ಇನ್ಯಾರದ್ದೋ ಮೃತದೇಹ ನೀಡಿ, ಕುಟುಂಬಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಕುಂದಾಪುರ ತಾಲೂಕಿನ ನೆರಂಬಳ್ಳಿ ನಿವಾಸಿ ಗಂಗಾಧರ್ ಆಚಾರ್ಯ (68) ಎಂಬವರಿಗೆ ಇಪ್ಪತ್ತು ದಿನಗಳ ಹಿಂದೆ ಕೊವಿಡ್ ಪಾಸಿಟಿವ್ ಆಗಿದ್ದು ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ ಎಂದು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದರು. 

ಆದರೆ, ಇಂದು ಬೆಳಗ್ಗೆ  ಗಂಗಾಧರ್ ಆಚಾರ್ಯ ಮೃತಪಟ್ಟಿದ್ದಾರೆಂದು ಆಸ್ಪತ್ರೆಯಿಂದ ಕರೆ ಬಂದಿತ್ತು. ಅದರಂತೆ, ಕುಂದಾಪುರದ ಸಂಗಮ್ ರುದ್ರಭೂಮಿಗೆ ಮೃತದೇಹ ತರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಕುಟುಂಬಸ್ಥರಿಗೆ ನೋಡಲು ಅವಕಾಶ ಇಲ್ಲ. ದೂರದಿಂದ ಮಾತ್ರ ನೋಡಬಹುದು ಎಂದು ಹೇಳಿದ್ದರು. 

ಮೃತದೇಹ ಬಂದ ನಂತರ ಮಕ್ಕಳು ತಂದೆಯ ಮುಖ ನೋಡಲೇ ಬೇಕು ಎಂದು ಹಠ ಹಿಡಿದಾಗ ಪಿಪಿಇ ಕಿಟ್ ಹಾಕಿ ಮೃತದೇಹ ನೋಡಲು ಮಾತ್ರ ಅವಕಾಶ ನೀಡಿದರು. ಮಕ್ಕಳು ಪಿಪಿಇ ಕಿಟ್ ಧರಿಸಿದ ತಂದೆಯ ಶವದ ಮುಖ ನೋಡಿದಾಗ ಶಾಕ್ ಆಗಿತ್ತು. ಗಂಗಾಧರ್ ಆಚಾರ್ಯ ಬದಲು ಬೇರೆ ಯಾರದ್ದೋ ಮೃತದೇಹ ಇದ್ದುದನ್ನು ಕಂಡು ಆರೋಗ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು. ಅಧಿಕಾರಿಗಳನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ತಮ್ಮ ತಂದೆ ಬದುಕಿದ್ದಾರೆ. ನೀವು ನಮ್ಮನ್ನು ಯಾಮಾರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರು ಸೇರಿ ಆಕ್ರೋಶ ವ್ಯಕ್ತಪಡಿಸಿದಾಗ ಆರೋಗ್ಯಧಿಕಾರಿಗಳು ತಬ್ಬಿಬ್ಬಾದರು. ಪರಿಸ್ಥಿತಿ ಬಿಗಡಾಯಿಸುವುದನ್ನ ಅರಿತ ಅಧಿಕಾರಿಗಳು ಪೊಲೀಸರನ್ನ ಕರೆಸಿದರು. ಸ್ಥಳಕ್ಕೆ ಬಂದ ಸಹಾಯಕ ಕಮಿಷನರ್ ಮೃತದೇಹವನ್ನು ವಾಪಸ್ ಕಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆದ್ರೆ ಇದಕ್ಕೊಪ್ಪದ ಕುಟುಂಬಸ್ಥರು ಹಾಗೂ ಸ್ಥಳೀಯರು, ಗಂಗಾಧರ್ ಆಚಾರ್ಯರ ಮೃತದೇಹ ಬಂದ ಬಳಿಕವೇ ಇಲ್ಲಿರುವ ಶವ ಒಯ್ಯಲು ಅವಕಾಶ ನೀಡುವುದಾಗಿ ಹೇಳಿದರು. 

ಇತ್ತ ಕಾರ್ಕಳ ತಾಲೂಕಿನ ಪ್ರಕಾಶ್ ಆಚಾರ್ಯ ಎನ್ನುವ ವ್ಯಕ್ತಿ ಜಾಂಡೀಸ್ ಕಾಯಿಲೆಯಿಂದ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ತೆರಳಿದಾಗ, ಮೃತದೇಹ ಇರದ್ದನ್ನು ನೋಡಿ ಆಕ್ರೋಶಕ್ಕೀಡಾದರು. ಮೃತದೇಹ ಕಾಣೆಯಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಎಡವಟ್ಟಿಗೆ ಹಿಡಿಶಾಪ ಹಾಕಿದ್ದಾರೆ. ಇದೇ ವೇಳೆ, ಅತ್ತ ಕುಂದಾಪುರದ ಗಂಗಾಧರ ಆಚಾರ್ಯ ಶವ ಅದಲು ಬದಲಾಗಿದ್ದನ್ನು ತಿಳಿದ ಆಸ್ಪತ್ರೆಯ ಸಿಬಂದಿ ಎರಡೂ ಕುಟುಂಬಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆಸಿಕೊಂಡಿದೆ. ಬಳಿಕ ತಮ್ಮ ತಮ್ಮ ಮೃತದೇಹಗಳನ್ನು ಕೊಂಡೊಯ್ಯಲು ಅವಕಾಶ ನೀಡಿದ್ದಾರೆ. 

ಸ್ಥಳಕ್ಕಾಗಮಿಸಿದ ಜಿಲ್ಲಾ ಸರಕಾರಿ ಆಸ್ಪತ್ರೆಯ ಅಧೀಕ್ಷಕ ಮಧುಸೂದನ್, ಕುಂದಾಪುರದ ಗಂಗಾಧರ ಆಚಾರ್ಯ ಉಡುಪಿ ಆಸ್ಪತ್ರೆಗೆ ಬಾರದೆ ಶವವನ್ನು ಆರೋಗ್ಯ ಸಿಬಂದಿಯೇ ಒಯ್ದಿದ್ದು ಎಡವಟ್ಟಿಗೆ ಕಾರಣವಾಗಿದೆ. ಪರಿಶೀಲಿಸದೆ ಶವ ರವಾನಿಸಿದ ವಿಚಾರದಲ್ಲಿ ಕಾರಣ ಕೇಳಿ ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.

Video: