ದ.ಕ. ಜಿಲ್ಲೆಯಲ್ಲಿ 10 ಸಾವಿರ ಗಡಿ ದಾಟಿದ ಕೊರೋನ, ಐವರು ಬಲಿ

23-08-20 10:50 pm       Mangalore Reporter   ಕರಾವಳಿ

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ನಾಗಾಲೋಟ ಮುಂದುವರಿದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಡಿದೆ. ರವಿವಾರ ಮತ್ತೆ ಐವರನ್ನು ಬಲಿ ಪಡೆದಿದೆ. ಹೊಸದಾಗಿ 193 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಮಂಗಳೂರು, ಆಗಸ್ಟ್ 23: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ನಾಗಾಲೋಟ ಮುಂದುವರಿದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಡಿದೆ. ರವಿವಾರ ಮತ್ತೆ ಐವರನ್ನು ಬಲಿ ಪಡೆದಿದೆ. ಹೊಸದಾಗಿ 193 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಮಂಗಳೂರಿನ ಮೂವರು, ಬಂಟ್ವಾಳದ ಇಬ್ಬರು ಕೊರೋನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲ ಕೊರೋನ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿನ ಮೃತರ ಸಂಖ್ಯೆ 310ಕ್ಕೆ ಏರಿದೆ.

193 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ರವಿವಾರ ಮತ್ತೆ 193 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,330ಕ್ಕೆ ಏರಿಕೆಯಾಗಿದೆ.

164 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಕೊರೋನದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ರವಿವಾರ ಒಂದೇ ದಿನ 164 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಿಂದ 67, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 97 ಮಂದಿ ಕೊರೋನ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 7,677ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿ 2,343 ಸಕ್ರಿಯ ಪ್ರಕರಣಗಳಿವೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.