ಕಾಲಿನ ಮೂಲಕ SSLC ಪರೀಕ್ಷೆ ಬರೆದು ಗಮನಸೆಳೆದಿದ್ದ ಕೌಶಿಕ್ ಈಗ ಮತ್ತೆ ಸುದ್ದಿಯಾಗಿದ್ದಾನೆ

24-08-20 11:53 am       Mangalore Reporter   ಕರಾವಳಿ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿ ಇದೀಗ ಮತ್ತೆ ಸುದ್ದಿಯಾಗಿದ್ದಾನೆ.

ಮಂಗಳೂರು, ಆಗಸ್ಟ್ 24: ಕಾಲಿನ ಮೂಲಕ ಎಸ್.ಎಸ್‌.ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಬಂಟ್ವಾಳ ದ ಕೌಶಿಕ್ ಚೌತಿಯ ದಿನದಂದು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟುತ್ತಿತರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೌಶಿಕ್ ಗಣೇಶ ಚತುರ್ಥಿ ದಿನ ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ (ಕಡುಬು) ತಯಾರಿಸಲು ಹಲಸಿನ ಮರದ ಎಲೆಯನ್ನು ಮನೆಯಲ್ಲಿ ತನ್ನ ಕಾಲ ಸಹಾಯದಿಂದಲೇ ಕಟ್ಟಿದ್ದಾನೆ. ಇದೀಗ ಈತನ ಪರಿಶ್ರಮದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. 

ಈತ ಪ್ರತಿ ವರ್ಷ ಅಷ್ಟಮಿ ಹಾಗೂ ಗಣೇಶ ಚತುರ್ಥಿಗೆ ಇದೇ ರೀತಿ ಕಡುಬು ಕಟ್ಟಿತ್ತಿದ್ದ. ಈ ಬಾರಿ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ತನ್ನ ಕಾಲಿನ ಮೂಲಕವೇ ಬರೆದು, ರಾಜ್ಯಾದ್ಯಂತ ಎಲ್ಲರ ಗಮನ ಸೆಳೆದಿದ್ದು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೌಶಿಕ್ ನನ್ನು ಮನೆಗೆ ಬಂದು ಭೇಟಿ ಮಾಡಿ ಪ್ರಶಂಸಿದ್ದರು. ಮಾತ್ರವಲ್ಲ ಪ್ರಥಮ ಶ್ರೇಣಿಯಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ.

ಇದೀಗ ಕಾಲಿನಿಂದಲೇ ಕಡುಬು ತಯಾರಿಸಿಯೂ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾನೆ.ಸಾಂಸ್ಕೃತಿಕ, ಕ್ರೀಡೆಗಳಲ್ಲೂ ಮುಂದಿರುವ ಕೌಶಿಕ್ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ.