ಉಡುಪಿ: ಮತ್ತೊಂದು ಮೀನುಗಾರಿಕಾ ಬೋಟ್ ಬಂಡೆಗೆ ಡಿಕ್ಕಿ ; ಈಜಿ ದಡ ಸೇರಿದ ಕಾರ್ಮಿಕರು 

24-08-20 08:52 pm       Udupi Reporter   ಕರಾವಳಿ

ಉಡುಪಿಯಲ್ಲಿ ಮತ್ತೊಂದು ಆಳ ಸಮುದ್ರ ಮೀನುಗಾರಿಕಾ ಬೋಟ್ ಬಂಡೆಗೆ ಡಿಕ್ಕಿ. ವಾರದ ಹಿಂದಷ್ಟೇ ಕುಂದಾಪುರದ ಕೊಡೇರಿಯಲ್ಲಿ ಮೀನುಗಾರಿಕಾ ಬೋಟೊಂದು ಹಿಂತಿರುಗಿ ಬರುತ್ತಿದ್ದಾಗ ಬಂಡೆಗೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ನಡೆದಿತ್ತು.

ಉಡುಪಿ, ಅಗಸ್ಟ್ 24: ಉಡುಪಿಯಲ್ಲಿ ಮತ್ತೊಂದು ಆಳ ಸಮುದ್ರ ಮೀನುಗಾರಿಕಾ ಬೋಟ್ ಬಂಡೆಗೆ ಡಿಕ್ಕಿಯಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಈಜಿ ದಡ ಸೇರಿದ್ದಾರೆ. 

ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಬಾಹುಬಲಿ ಹೆಸರಿನ ಬೋಟ್, ದಡದಿಂದ ಮೂರು ನಾಟಿಕಲ್ ದೂರದಲ್ಲಿ ಬಂಡೆಗೆ ಡಿಕ್ಕಿಯಾಗಿದೆ. ಉದ್ಯಾವರದ ಗಿರೀಶ ಸುವರ್ಣ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು ಅವಘಡದಿಂದ 80 ಲಕ್ಷ ರೂಪಾಯಿ ನಷ್ಟವಾಗಿದೆ. 

ಬೋಟ್ ಮುಳುಗಡೆಯಾಗುತ್ತಿದ್ದಂತೆ ದೋಣಿಯಿಂದ ಜಿಗಿದ ಏಳು ಜನ, ಸಮುದ್ರದ ಅಲೆಗಳೊಂದಿಗೆ ಈಜುತ್ತಾ ದಡ ಸೇರಿದ್ದಾರೆ. ಈ ವೇಳೆ, ಬೇರೆ ಮೀನುಗಾರಿಕಾ ಬೋಟ್ ಬಳಸಿ ಬೋಟ್  ಮೇಲಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗದೆ ಬೋಟ್ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. 

ವಾರದ ಹಿಂದಷ್ಟೇ ಕುಂದಾಪುರದ ಕೊಡೇರಿಯಲ್ಲಿ ಮೀನುಗಾರಿಕಾ ಬೋಟೊಂದು ಹಿಂತಿರುಗಿ ಬರುತ್ತಿದ್ದಾಗ ಬಂಡೆಗೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ನಡೆದಿತ್ತು.