ತಲಪಾಡಿಯಲ್ಲಿ ಗಡಿಬಿಡಿ ; ಕೇರಳದ ಮೊಂಡುವಾದ ವಿರೋಧಿಸಿ ಬಿಜೆಪಿ ಪ್ರತಿಭಟನೆ

25-08-20 05:03 pm       Mangalore News   ಕರಾವಳಿ

ಕೇಂದ್ರ ಸರಕಾರ ಅಂತಾರಾಜ್ಯ ಸಂಚಾರ ಮುಕ್ತ ಅವಕಾಶ ನೀಡಿದ್ದರೂ, ಕೇರಳ ಸರಕಾರ ಕಾಸರಗೋಡು - ಮಂಗಳೂರು ಗಡಿಯನ್ನು ಬಂದ್ ಮಾಡಿರುವುದನ್ನು ವಿರೋಧಿಸಿ ಗಡಿಭಾಗ ತಲಪಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಮಂಗಳೂರು, ಆಗಸ್ಟ್ 25: ಕೇಂದ್ರ ಸರಕಾರ ಅಂತಾರಾಜ್ಯ ಸಂಚಾರ ಮುಕ್ತ ಅವಕಾಶ ನೀಡಿದ್ದರೂ, ಕೇರಳ ಸರಕಾರ ಕಾಸರಗೋಡು - ಮಂಗಳೂರು ಗಡಿಯನ್ನು ಬಂದ್ ಮಾಡಿರುವುದನ್ನು ವಿರೋಧಿಸಿ ಗಡಿಭಾಗ ತಲಪಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಗಡಿಭಾಗ ತಲಪಾಡಿಯಲ್ಲಿ ಹೆದ್ದಾರಿಗೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಕೆಡವಿ ಮುನ್ನುಗ್ಗಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿದರು. ಗಡಿಯಲ್ಲಿ ತಡೆಬೇಲಿ ಹಾಕಿದ್ದ ಪೊಲೀಸರ ಕ್ರಮ ಹಾಗೂ ಕಾಸರಗೋಡು ಜಿಲ್ಲಾಡಳಿತ ಮಾಡಿರುವ ಪಾಸ್ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆದಿದ್ದು ಪಕ್ಷದ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ನೇತೃತ್ವ ವಹಿಸಿದ್ದರು. 

ಕಾಸರಗೋಡು ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ಜನ ನಿತ್ಯ ಉದ್ಯೋಗಕ್ಕಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ಆದರೆ ಕೇರಳ ಸರಕಾರ ಗಡಿ ತೆರೆಯದೆ ಈ ಭಾಗದ ಜನರಿಗೆ ತೊಂದರೆ ನೀಡುತ್ತಿದೆ.‌ ಕರ್ನಾಟಕಕ್ಕೆ ತೆರಳಿದರೆ ಕೊರೊನಾ ಬರುತ್ತದೆ ಎನ್ನುವ ಮೊಂಡುವಾದ ಮುಂದಿಡುತ್ತಿದೆ. ಅಂತಾರಾಜ್ಯ ಸಂಚಾರ ಮುಕ್ತಗೊಳಿಸಿ ಕೇಂದ್ರ ಸರಕಾರ ಆದೇಶ ಮಾಡಿದ್ದಲ್ಲದೆ ಹೈಕೋರ್ಟ್ ಕೂಡ ಜನರ ಸಂಚಾರಕ್ಕೆ ಅವಕಾಶ ಕೊಡಬೇಕೆಂದು ಸೂಚನೆ ನೀಡಿದೆ. ಆದರೆ, ಕಾಸರಗೋಡು ಭಾಗದ ಶಾಸಕರು ಮತ್ತು ಸಂಸದರು ಜನರ ಬವಣೆಗೆ ಕಿವುಡಾಗಿದ್ದಾರೆ ಎಂದು ಕೆ.ಶ್ರೀಕಾಂತ್ ಕಿಡಿಕಾರಿದ್ದಾರೆ.

ಇನ್ನೊಂದು ದಿನದಲ್ಲಿ ಗಡಿ ಓಪನ್ ಮಾಡದಿದ್ದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಶ್ರೀಕಾಂತ್ ನೀಡಿದ್ದಾರೆ.