ಮಂಗಳೂರು: ಮರಳು ಕಾರ್ಮಿಕರಿಗೆ ರಾಜಯೋಗ, ವಿಮಾನದಲ್ಲಿ ಕರೆತಂದ ಮಾಲಕರು !

26-08-20 10:46 am       Mangalore Reporter   ಕರಾವಳಿ

ಜಿಲ್ಲೆಯಲ್ಲಿ ಮರಳು ಕಾರ್ಮಿಕರಿಗೂ ರಾಜಯೋಗ ತಂದಿಟ್ಟಿದೆ. ಮಂಗಳೂರಿನ ಹೊಯ್ಗೆ ಮಾಲಕರು ಸೇರಿ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ತುರ್ತಾಗಿ ಫ್ಲೈಟಿನಲ್ಲಿ ಕರೆತಂದಿದ್ದಾರೆ ಎನ್ನುವ ಸುದ್ದಿ ಬಂದಿದೆ.

ಮಂಗಳೂರು, ಆಗಸ್ಟ್ 26: ಕೊರೊನಾ ಲಾಕ್ಡೌನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಕಾರ್ಮಿಕರಿಗೂ ರಾಜಯೋಗ ತಂದಿಟ್ಟಿದೆ. ಲಾಕ್ ಡೌನ್ ಬಳಿಕ ತಮ್ಮೂರಿಗೆ ತೆರಳಿದ್ದ ಉತ್ತರ ಭಾರತ ಮೂಲದ ಮರಳು ಕಾರ್ಮಿಕರನ್ನು ಮಂಗಳೂರಿನ ಹೊಯ್ಗೆ ಮಾಫಿಯಾ ವಿಮಾನದಲ್ಲಿ ತರಿಸಿಕೊಂಡಿದೆ ಎನ್ನುವ ಸುದ್ದಿ ಬಂದಿದೆ.

ಲಾಕ್ಡೌನ್ ಬಳಿಕ ಬದುಕಿದರೆ ಬೇಡಿ ತಿಂದೇನು ಎಂದು ತಮ್ಮೂರಿಗೆ ಓಡಿಹೋಗಿದ್ದ ಕಾರ್ಮಿಕರು ಈಗ ಮತ್ತೆ ನಗರಕ್ಕೆ ಕಾಲಿಡತೊಡಗಿದ್ದಾರೆ. ಆದರೆ, ಉತ್ತರ ಭಾರತ ಮೂಲದ ಮರಳು ಕಾರ್ಮಿಕರು ಆಗಮಿಸಲು ರೈಲು ಸಂಚಾರ ಇಲ್ಲದೆ ಕಷ್ಟವಾಗಿದೆ. ಹೀಗಾಗಿ ಮಂಗಳೂರಿನ ಹೊಯ್ಗೆ ಮಾಲಕರು ಸೇರಿ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ತುರ್ತಾಗಿ ಫ್ಲೈಟಿನಲ್ಲಿ ಕರೆತಂದಿದ್ದಾರೆ ಎನ್ನಲಾಗುತ್ತಿದೆ.

ಎರಡು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾರ್ಮಿಕರನ್ನು ನೋಡಿದ ಅಲ್ಲಿನ ಸಿಬಂದಿಗೇ ಅಚ್ಚರಿಯಾಗಿತ್ತು. ಸಾಧಾರಣ ಮಧ್ಯಮ ವರ್ಗದವರೇ ವಿಮಾನ ಹತ್ತಲು ಅಸಾಧ್ಯ ಎನ್ನುವಂತಿದ್ದರೆ, ಮರಳು ಕಾರ್ಮಿಕರು ಜೀವನದಲ್ಲಿ ಎಂದೂ ಸಿಗದ ಭಾಗ್ಯವನ್ನು ತಮ್ಮ ಮಾಲಕರ ಮೂಲಕ ಅನುಭವಿಸಿದ್ದಾರೆ ಎಂದು ಅಲ್ಲಿನ ಸಿಬಂದಿ ಹೇಳುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಮೂಲದ ಕಾರ್ಮಿಕರು ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮರಳನ್ನು ತೆಗೆಯುತ್ತಾರೆ. ಜಿಲ್ಲಾಡಳಿತದಿಂದ ಮರಳು ತೆಗೆಯಲು ಅನುಮತಿ ಸಿಕ್ಕಿರದಿದ್ದರೂ, ದಂಧೆಕೋರರು ಈಗಲೇ ಮರಳು ಎತ್ತುವ ಕಾರ್ಯ ಆರಂಭಿಸಿದ್ದಾರೆ.

ಮಂಗಳೂರಿನ ಅಡ್ಯಾರ್, ಕಣ್ಣೂರಿನಲ್ಲಿ ಮರಳು ಎತ್ತುವ ಕಾರ್ಯ ಸರಾಗವಾಗಿ ನಡೆದಿದೆ. ಫಲ್ಗುಣಿ ನದಿಯಿಂದಲೂ ಅಲ್ಲಲ್ಲಿ ಮರಳು ತೆಗೆಯಲು ದಂಧೆಕೋರರು ಕೆಲಸ ಆರಂಭಿಸಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೆ ತುರ್ತಾಗಿ ಮರಳು ತೆಗೆಯಬೇಕಿದ್ದರೆ ಇಲ್ಲಿನ ಕಾರ್ಮಿಕರಿಂದ ಸಾಧ್ಯವಾಗಲ್ಲ. ನದಿಯಲ್ಲಿ ನೀರು ಹೆಚ್ಚಿರುವಾಗ ಮರಳು ತೆಗೆಯುವುದು ಅಪಾಯ ಆಗಿರುವುದರಿಂದ ಸ್ಥಳೀಯ ಕಾರ್ಮಿಕರು ಈ ಕೆಲಸಕ್ಕೆ ಬರಲ್ಲ. ಅದಕ್ಕಾಗಿ ಈ ಹಿಂದೆ ಇಲ್ಲಿ ಮರಳೆತ್ತುವ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಕಾರ್ಮಿಕರನ್ನು ಮಾಲಕರು ಮತ್ತೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮರಳು ಉದ್ಯಮ ನಡೆಸುವ ಒಬ್ಬರಲ್ಲಿ ಕೇಳಿದರೆ, ಹೌದಾ.. ನಂಗೊತ್ತಿಲ್ಲ ಮಾರ್ರೇ.. ಎಂದು ಮೂಗು ಮುರಿಯುತ್ತಾರೆ !